ಸಾರ್ಥಕ ಜೀವನಕ್ಕೆ ಧರ್ಮ ಮಾರ್ಗದರ್ಶಕ: ವಿಧುಶೇಖರ ಭಾರತೀ ಶ್ರೀ

KannadaprabhaNewsNetwork |  
Published : Apr 19, 2024, 01:01 AM ISTUpdated : Apr 19, 2024, 01:02 AM IST
ಶ್ರೀಗಳ ಭೇಟಿ  | Kannada Prabha

ಸಾರಾಂಶ

ಮನುಷ್ಯ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮಾಚರಣೆಯಿಂದ ಇದು ಸಾಧ್ಯ ಎಂದು ಶೃಂಗೇರಿಯ ವಿಧುಶೇಖರ ಭಾರತೀ ಶ್ರೀಗಳು ತಿಳಿಸಿದರು.

ಶಿರಸಿ: ಧರ್ಮದ‌ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮದಲ್ಲಿ ನಡೆಯಲು ಗುರುವಿನ‌ ಉಪದೇಶ ಪಡೆದು ಮುನ್ನಡೆಯಬೇಕು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮಿಗಳು ನುಡಿದರು.

ಗುರುವಾರ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು.

ಜೀವನ ನಡೆಸುವುದು ಎಂದರೆ ಪ್ರಾಣಿಗಳು ಮಾಡುತ್ತವೆ. ಆದರೆ ಮನುಷ್ಯ ಅದಕ್ಕಿಂತ ಬೇರೆಯಾಗಿದ್ದಾನೆ. ಮನುಷ್ಯ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಆಗ ಮನುಷ್ಯ ಜನ್ಮ‌ ಸಾರ್ಥಕ ಆಗುತ್ತದೆ. ಧರ್ಮಾಚರಣೆಯಿಂದ ಇದು ಸಾಧ್ಯ. ಪರಂಪರೆಯ ಗುರುಗಳಿಂದ‌ ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯ ನಡೆದಿದೆ ಎಂದರು.

ಧರ್ಮ ಮಾರ್ಗದ ಬೋಧಿಸಿ, ನಿಷ್ಠೆ ತೋರಿದವರು ಶಂಕರಾಚಾರ್ಯರು. ಧರ್ಮವನ್ನು ದೃಢವಾಗಿ ಸ್ಥಾಪಿಸಿದ್ದಾರೆ. ಆಕ್ರಮಣ ಆದರೂ, ಆಗುತ್ತಿದ್ದರೂ‌ ಧರ್ಮ ನಿಂತಿದೆ. ಅದಕ್ಕೆ ‌ಕಾರಣ ಶಂಕರರು ಸ್ಥಾಪಿಸಿದ ದೃಢವಾದ ಧರ್ಮ ಸ್ಥಾಪನೆ ಮಾಡಿದ್ದು ಎಂದರು.

ರಾಗ ದ್ವೇಷ ‌ಇಲ್ಲದವರು ಸನ್ಯಾಸಿಗಳು. ಶಿಷ್ಯರಿಗೆ ರಾಗ ದ್ವೇಷ ಇಲ್ಲದೇ ‌ವೈರಾಗ್ಯದಿಂದ ಮಾರ್ಗದರ್ಶನ ಮಾಡುತ್ತಾರೆ. ಧಾರ್ಮಿಕ ಮಾರ್ಗದರ್ಶನಕ್ಕೆ ಗುರುವಿನ ಮಾರ್ಗದರ್ಶನ ಬೇಕು ಎಂದರು.

ಸಾನ್ನಿಧ್ಯ ನೀಡಿದ್ದ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಆಶೀರ್ವಚನ ನುಡಿದು, ಶಬ್ದ ಎಂಬ ಬೆಳಕು ಬೆಳಗದೇ ಇದ್ದರೆ ಮೂರು‌ ಲೋಕಗಳು ಕತ್ತಲಾಗುತ್ತಿದ್ದವು. ಶಂಕರಾಚಾರ್ಯರು ಎಂಬ ಅವತಾರಿಗಳು ಬಾರದೇ ಇದ್ದರೆ ಲೋಕ ಅಂಧಕಾರದಲ್ಲಿ ಇರುತ್ತಿತ್ತು. ಅವರಿಂದ ಜ್ಞಾನ ಎಂಬ ಬೆಳಕು ಬಂತು. ವೇದೋಕ್ತ ಜ್ಞಾನ ಕಾಂಡಕ್ಕೆ ಶಂಕರರಿಂದ ಬೆಳಕು ಬಂದಿದೆ. ಭಗವದ್ಗೀತೆ ಗಮನಕ್ಕೆ ಬರಲು ಅವರ ಭಾಷ್ಯವೇ ಕಾರಣ. ಜ್ಞಾನದ ಬೆಳಕು ಇಷ್ಟೊಂದು ಬರಲು ಶಂಕರರೇ ಕಾರಣ ಎಂದರು.

ಮಠಗಳಲ್ಲಿ ಜ್ಞಾನದ ಪರಂಪರೆ ಇಂದಿಗೂ ಮುನ್ನಡೆಯುತ್ತಿದೆ. ಶೃಂಗೇರಿಯಲ್ಲಿ ಪರಂಪರೆ ಮುಂದುವರಿದಿದೆ ಎಂದು ಹೇಳಿದ ಶ್ರೀಗಳು, ಆನಂದದ ಅನುಭವ ಜೀವನದಲ್ಲಿ‌ ಮುಖ್ಯ. ಧರ್ಮದ ಅನುಭವ ಹೇಳುವಾಗಲೂ ಅದನ್ನೇ ಹೇಳುವರು. ಅಂತರಾತ್ಮಕ್ಕೆ ತೃಪ್ತಿ ಆದರೆ ಆನಂದದ ಅನುಭವ ಬರುತ್ತದೆ. ಆನಂದದ ಅನುಭವ ಆಗಬೇಕಾದರೆ ಸಂತುಷ್ಟಿಯಿಂದ ಆತ್ಮ ಸಾಕ್ಷಿಯಾಗಬೇಕು. ಅದೇ ಧರ್ಮ. ಶೃಂಗೇರಿ ಜಗದ್ಗುರುಗಳು ಆಗಮಿಸಿದ್ದು ಆನಂದ ಉಂಟಾಗಿದೆ‌ ಎಂದರು. ಈ ಸಂದರ್ಭದಲ್ಲಿ ಶಿಷ್ಯಸ್ವೀಕಾರದ ಅನುಭವ ಹಂಚಿಕೊಂಡರು. ಈ ವೇಳೆ ಆನಂದಬೋಧೇಂದ್ರ ಸ್ವಾಮಿಗಳು ಸಾನ್ನಿಧ್ಯವನ್ನು ನೀಡಿದ್ದರು. ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಪಾದಪೂಜೆ ನೆರವೇರಿಸಿದರು. ಕಾರ್ಯದರ್ಶಿ ಗಣಪತಿ ಹೆಗಡೆ ಗೊಡವೆಮನೆ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.

ರಾಜರಾಜೇಶ್ವರಿ ಸಂಸ್ಕೃತ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ವೇದ ಘೋಷ ಮಾಡಿದರು. ವಸಂತವೇದ ಶಿಬಿರಾರ್ಥಿಗಳು, ಭಕ್ತರು- ಶಿಷ್ಯರು ಭಾಗವಹಿಸಿದ್ದರು. ಕಿರುಕುಂಭತ್ತಿ ಮಹಾಬಲೇಶ್ವರ ಭಟ್ಟ ‌ನಿರ್ವಹಿಸಿದರು. ಮಾತೆಯರು ಪೂರ್ಣಕುಂಭ ಸ್ವಾಗತ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ