ಹಾನಗಲ್ಲ: ಬಡವರ ಸೇವೆ ಮಾಡಿದ ಸಾಹುಕಾರ, ರೈತರ ಭೂಮಿಗೆ ನೀರು ಹರಿಸಿದ ಭಗೀರಥ, ಅನ್ನದಾನ, ವಿದ್ಯಾದಾನದ ಕೈಂಕರ್ಯ ಮೆರೆದ, ರಾಜಕಾರಣದಲ್ಲಿದ್ದರೂ ರಾಜಕಾರಣ ಮಾಡದ ಮಾದರಿ ವ್ಯಕ್ತಿತ್ವವುಳ್ಳ ಸಿಂಧೂರ ಸಿದ್ದಪ್ಪನವರ ಹೆಸರನ್ನು ಧರ್ಮಾ ಜಲಾಶಯಕ್ಕೆ ನಾಮಕರಣ ಮಾಡಬೇಕು ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು. ಶನಿವಾರ ಅಕ್ಕಿಆಲೂರಿನ ಸಿಂಧೂರ ಸಿದ್ಧಪ್ಪ ಪ್ರೌಢಶಾಲೆಯಲ್ಲಿ ಹಾನಗಲ್ಲ ತಾಲೂಕು ಶಿಕ್ಷಣ ಸಂಸ್ಥೆ ಹಾಗೂ ಹಾವೇರಿಯ ಅರಳೀಕಟ್ಟಿ ಪ್ರಕಾಶನ ಸಂಯುಕ್ತವಾಗಿ ಆಯೋಜಿಸಿದ ಸ್ವಾತಂತ್ರ್ಯ ಸೇನಾನಿ ಧೀಮಂತ ನಾಯಕ ಸಿಂಧೂರ ಸಿದ್ದಪ್ಪನವರ 126ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಾಸಕರಾಗಿ ಸರ್ಕಾರದ ಹಣವನ್ನು ಸಮಾಜಕ್ಕಾಗಿ ಮೀಸಲಿಟ್ಟು ಸ್ವಂತಕ್ಕೆ ಬಳಸಿಕೊಳ್ಳ ಕೂಡದು ಎಂಬ ಸತ್ಯವನ್ನು ಬದುಕಿನಲ್ಲಿ ಪಾಲಿಸಿದವರು ಸಿಂಧೂರ ಸಿದ್ದಪ್ಪನವರು. ಕೃಷಿಕರು, ಬಡವರು, ದೀನ ದಲಿತರ ಪ್ರೀತಿ ಉಳ್ಳ ಅವರು ತಮ್ಮ ನಡೆ ನುಡಿಯಿಂದ ದೊಡ್ಡವರಾದವರು. ಬದುಕಿನ ಹಾದಿಯಲ್ಲಿ ಎಲ್ಲಿಯೂ ಸ್ವಾರ್ಥ ಬೆರೆಯಲಿಲ್ಲ. ಧರ್ಮಾ ಜಲಾಶಯ ಹಾಗೂ ಸಂಗೂರು ಸಕ್ಕರೆ ಕಾಖಾನೆಗಾಗಿ ಹಗಲಿರುಳು ದುಡಿದರೂ ದಣಿಯದೆ, ವಿದ್ಯಾರ್ಥಿ ದೆಸೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಶಿಕ್ಷಣವನ್ನೇ ಮೊಟಕುಗೊಳಿಸಿ ಸ್ವಗ್ರಾಮಕ್ಕೆ ಬಂದವರು. ಸ್ವಚ್ಛ ರಾಜಕಾರಣಕ್ಕೆ ಮಾದರಿಯಾದವರು. ಧರ್ಮಾ ಜಲಾಶಯದ ನಿರ್ಮಾಣದಿಂದ 16 ಸಾವಿರ ಎಕರೆ ಕೃಷಿ ಭೂಮಿ ನೀರಾವರಿಯಾಗುವಂತೆ ಶ್ರಮಿಸಿದವರು. ಅನ್ನದಾತರ ಸಂಕಷ್ಟ ಅರಿತು ಅವರ ಹಸಿವು ಬಾಯಾರಿಕೆ ನೀಗಿಸಿದ ದಿಟ್ಟ ನಾಯಕ. ಶಿಕ್ಷಣ ಸಂಸ್ಥೆ ಕಟ್ಟಿದ ದೂರದೃಷ್ಟಿಯ ನಾಯಕ ಸಿಂಧೂರ ಸಿದ್ದಪ್ಪ ಎಂದರು. ಆಶಯ ನುಡಿ ನುಡಿದ ಅರಳೀಕಟ್ಟಿ ಪ್ರಕಾಶನದ ಗೂಳಪ್ಪ ಅರಳೀಕಟ್ಟಿ, ಪುಸ್ತಕ ಸಂಸ್ಕೃತಿ ಬೇಕಾಗಿದೆ. ಮಹಾತ್ಮರ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸ ಸಾಹಿತ್ಯ ಲೋಕದಲ್ಲಿ ಇನ್ನೂ ಚುರುಕಾಗಬೇಕು. ಸಿಂಧೂರ ಸಿದ್ದಪ್ಪನವರನ್ನು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುವ ಅಗತ್ಯ ಈಗಿದೆ. ಅವರ ಪ್ರಾಮಾಣಿಕತೆ, ಶಿಸ್ತು, ಸಂಯಮ ಇಂದಿನ ರಾಜಕಾರಣಿಗಳಿಗೆ ಮಾದರಿಯಾದುದು ಎಂದರು. ಅಧ್ಯಕ್ಷತೆವಹಿಸ ಮಾತನಾಡಿದ ಎಚ್‌ಟಿಇಎಸ್ ಸಂಸ್ಥೆ ಕೋಶಾಧ್ಯಕ್ಷ ವಿ.ಎಚ್.ಪೂಜಾರ, ನಾನು ಸಿಂಧೂರ ಸಿದ್ದಪ್ಪನವರನ್ನು ಕಣ್ಣಾರೆ ಕಂಡವನು. ಅವರ ಸಮಾಜಮುಖಿ ಸೇವೆಯನ್ನು ನೋಡಿದವರು. ಅವರೇ ಕಟ್ಟಿದ ಶಾಲೆಯಲ್ಲಿ ಓದಿ, ಅಲ್ಲಿಯೇ ಶಿಕ್ಷಕನಾಗಿಯೂ ಸೇವೆ ಸಲ್ಲಿಸದವರು. ಇಂದು ಶಿಕ್ಷಣ ವ್ಯಾಪಾರೀಕರಣ ನಡೆದಿದೆ. ಆದರೆ ಸಿಂಧೂರ ಸಿದ್ದಪ್ಪನವರಿಗೆ ದೂರದೃಷ್ಟಿಯ ಕಾರಣದಿಂದಾಗಿಯೇ ಹಳ್ಳಿಯಲ್ಲಿ ಶಾಲೆಯನ್ನು ಮಾಡಿ, ಸುತ್ತಮುತ್ತಲ ಹಳ್ಳಿಯ ಬಡ ಮಕ್ಕಳು ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸಿದ ಧೀಮಂತ ವ್ಯಕ್ತಿತ್ವ ಅವರದು ಎಂದರು. ಮಾತನಾಡುತ್ತಲೇ ಪೂಜಾರ ಅವರ ಕಣ್ಣುಗಳು ತೇವವಾದವು.ಕಾರ್ಯಕ್ರಮದಲ್ಲಿ ಸಿಂಧೂರ ಸಿದ್ದಪ್ಪನವರ ಮೊಮ್ಮಗ ಸಂಗಪ್ಪ ಸಿಂಧೂರ, ಸಂಸ್ಥೆಯ ನಿರ್ದೇಶಕರಾದ ಸದಾಶಿವ ಬೆಲ್ಲದ, ಉದಯಕುಮಾರ ಕೂಬಿಹಾಳ, ಸಿದ್ದಪ್ಪ ಸಿಂಧೂರ, ಕುಮಾರ ಧಾರವಾಡ, ಪ್ರಾಚಾರ್ಯರಾದ ಎಸ್.ಬಿ. ಕಲ್ಲೇರ, ಬಿ.ಎನ್. ಮ್ಯಾಗಳಗೇರಿ, ಮುಖ್ಯೋಪಾಧ್ಯಾಯರಾದ ವಿ.ಎಸ್. ಚಿಕ್ಕಣ್ಣನವರ, ಆರ್.ಎಚ್. ಓಲೇಕಾರ, ಸುಮಾ ಸಾವಕ್ಕನವರ ಪಾಲ್ಗೊಂಡಿದ್ದರು.ಪುಷ್ಪಾರ್ಚನೆ : ಕಾರ್ಯಕ್ರಮದ ಆರಂಭದಲ್ಲಿ ಸಿಂಧೂರ ಸಿದ್ದಪ್ಪನವರ ಭಾವಚಿತ್ರಕ್ಕೆ ಗಣ್ಯರು ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.