ಚಿನ್ನಾಭರಣ, ನಗದು ದೋಚಿ ಪರಾರಿಗೆ ಯತ್ನಿಸಿದವರಿಗೆ ಧರ್ಮದೇಟು

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ರಾಮನಗರ: ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಕಾರು ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದ್ದಲ್ಲದೆ, ಗ್ರಾಮಸ್ಥರು ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ದೊಡ್ಡಗಂಗವಾಡಿಯಲ್ಲಿ ರಾತ್ರಿ ನಡೆದಿದೆ.

ರಾಮನಗರ: ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಕಾರು ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದ್ದಲ್ಲದೆ, ಗ್ರಾಮಸ್ಥರು ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ದೊಡ್ಡಗಂಗವಾಡಿಯಲ್ಲಿ ರಾತ್ರಿ ನಡೆದಿದೆ.

ಘಟನೆಯಿಂದಾಗಿ ದೊಡ್ಡಗಂಗವಾಡಿ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು. ತಾವರಕೆರೆ ನಿವಾಸಿ ಲೋಹಿತ್​, ದೊಡ್ಡಗಂಗವಾಡಿಯ ಸಂಜು ಸೇರಿ ಮೂವರು ಪೊಲೀಸರ ವಶದಲ್ಲಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ.

ಘಟನೆ ವಿವರ:

ದೊಡ್ಡಗಂಗವಾಡಿಯಲ್ಲಿ ಜಮೀನಿನ ವಿಚಾರವಾಗಿ ಗುರುವಾರ ಮಧ್ಯಾಹ್ನ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಈ ವಿಚಾರಕ್ಕೆ ಸಂಜು ತನ್ನ ಸ್ನೇಹಿತ ತಾರವಕೆರೆಯಲ್ಲಿ ಮರದ ವ್ಯಾಪಾರಿಯಾಗಿರುವ ಲೋಹಿತ್ ಸೇರಿದಂತೆ ಕೆಲ ಯುವಕರನ್ನು ಬೆಳಗ್ಗೆ ಗ್ರಾಮಕ್ಕೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಈ ಯುವಕರ ಗುಂಪು ಜಮೀನಿನ ಗಲಾಟೆಯಲ್ಲಿ ಹಲ್ಲೆ ಮಾಡಿದ್ದರಿಂದ ಓರ್ವ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಇದಾದ ತರುವಾಯ ಲೋಹಿತ್ ತಾನು ತಂದಿದ್ದ ವರ್ನಾ ಕಾರನ್ನು ಯುವಕರಿಗೆ ನೀಡಿದ್ದು, ಆ ಯುವಕರ ಗುಂಪು ಸಂಜೆ ದೊಡ್ಡಗಂಗವಾಡಿ ಗ್ರಾಮದ ಹೊರಗೆ ನಿಂತಿದ್ದರು. ಇದೇ ಸಮಯಕ್ಕೆ ರಾಮನಗರದ ಮಂಜುನಾಥನಗರದಿಂದ ದೊಡ್ಡಗಂಗವಾಡಿ ಮಾರ್ಗವಾಗಿ ಹೊಂಬೇಗೌಡನ ಗ್ರಾಮದ ಮನೆಗೆ ಸಾಮಗ್ರಿಗಳನ್ನು ಶಿಫ್ಟ್ ಮಾಡಲು ರವಿಕುಮಾರ್ ಮತ್ತು ಪ್ರಮಿಳಾ ದಂಪತಿ ತೆರಳುತ್ತಿದ್ದರು. ಸಾಮಗ್ರಿಗಳಿದ್ದ ಟೆಂಪೋ ಮುಂದೆ ಸಾಗಿದರೆ, ಅದರ ಹಿಂದೆ ದಂಪತಿ ಸೇರಿ ಮೂವರು ಕಾರಿನಲ್ಲಿ ತೆರಳುತ್ತಿದ್ದರು.

ದೊಡ್ಡಗಂಗವಾಡಿ - ಚಿಕ್ಕಗಂಗವಾಡಿ ರಸ್ತೆಯಲ್ಲಿ ನಿಂತಿದ್ದ ಯುವಕರ ಗ್ಯಾಂಗ್ ಮೊದಲು ಸಾಮಗ್ರಿಗಳಿದ್ದ ಟೆಂಪೋವನ್ನು ವರ್ನಾ ಕಾರಿನಲ್ಲಿ ಅಡ್ಡಗಟ್ಟಿ ಚಾಲಕ ಅಜರ್ ಪಾಷನನ್ನು ಥಳಿಸಿದೆ. ಹಲ್ಲೆ ತಡೆಯಲು ಬಂದ ರವಿಕುಮಾರ್ ಮೇಲೆ ಗುಂಪು ರಾಡಿನಿಂದ ಹಲ್ಲೆ ಮಾಡಿ 4 ಲಕ್ಷ ನಗದು ಕಸಿದುಕೊಂಡಿದ್ದಾರೆ. ಪತಿಯ ರಕ್ಷಣೆಗೆ ಬಂದ ಪತ್ನಿ ಪ್ರಮಿಳಾ ಮೇಲೂ ಹಲ್ಲೆ ಮಾಡಿ ಆಕೆ ಬಳಿಯಿದ್ದ 35 ಗ್ರಾಂ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡಿದ್ದಾರೆ. ಇಬ್ಬರು ಚಾಲಕರನ್ನು ವೈಯರ್ ನಿಂದ ಕುತ್ತಿಗೆಗೆ ಬಿಗಿದು ಧರಧರನೆ ಎಳೆದಿದ್ದಾರೆ.

ಹಲ್ಲೆಯಿಂದ ಗಾಯಗೊಂಡವರ ಚೀರಾಟ ಕೇಳಿ ಸ್ಥಳೀಯರು ಆಗಮಿಸುತ್ತಿದ್ದಂತೆ ನಾಲ್ವರು ಯುವಕರು ವರ್ನಾ ಕಾರಿನಲ್ಲಿ ರಾಮನಗರದತ್ತ ಹೊರಟಿದ್ದಾರೆ. ರಸ್ತೆ ಅಪಘಾತ ಸಂಭವಿಸಿರಬಹುದೆಂದು ನಾಲ್ವರ ರಕ್ಷಣೆಗೆ ಧಾವಿಸಿದ ಗ್ರಾಮಸ್ಥರಿಗೆ ಟೆಂಪೋ ಚಾಲಕ ಅಜರ್ ಪಾಷಾ ದರೋಡೆ ಮಾಡಿರುವ ಸಂಗತಿಯನ್ನು ತಿಳಿಸಿದ್ದಾರೆ. ತಕ್ಷಣ ಗ್ರಾಮಸ್ಥರು ಊರಿನವರಿಗೆ ವರ್ನಾ ಕಾರನ್ನು ಅಡ್ಡಗಟ್ಟುವಂತೆ ಮಾಹಿತಿ ನೀಡಿದ್ದಾರೆ. ಅದರಂತೆ ಗ್ರಾಮದ ವೀರಭದ್ರ ದೊಡ್ಡಗಂಗವಾಡಿ ಗ್ರಾಮದಲ್ಲಿ ವರ್ನಾ ಕಾರನ್ನು ಅಡ್ಡಗಟ್ಟಲು ಮುಂದಾದಾಗ ಗುಂಪು ಆತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ದೊಡ್ಡಗಂಗವಾಡಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ವರ್ನಾ ಕಾರು ಎರಡು ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದ ನಾಲ್ವರು ಯುವಕರು ಹೊರ ಬಂದು ಪಾರಾಗಿದ್ದಾರೆ.

ದರೋಡೆ ಸುದ್ದಿ ಕೇಳಿ ರೊಚ್ಚಿಗೆದ್ದ ಗ್ರಾಮಸ್ಥರು ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದ ಸ್ಥಳಕ್ಕೆ ಬಂದಾಗ ಆ ಯುವಕರು ಏನು ಗೊತ್ತಿಲ್ಲದ್ದಂತೆ ವರ್ತಿಸಿದ್ದಾರೆ. ಅಲ್ಲಿದ್ದ ಸಂಜು, ಲೋಹಿತ್ ಸೇರಿ ಮೂವರು ಯುವಕರನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಾಲ್ವರ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಯುವಕರ ಗುಂಪಿನಿಂದ ಹಲ್ಲೆಗೊಳಗಾದ ಟೆಂಪೋ ಚಾಲಕ ಅಜರ್ ಪಾಷ, ದಂಪತಿಗಳಾದ ರವಿಕುಮಾರ್ ಮತ್ತು ಪ್ರಮಿಳಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

24ಕೆಆರ್ ಎಂಎನ್ 7,8,9,10.ಜೆಪಿಜಿ

7.ದೊಡ್ಡಗಂಗವಾಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿರುವುದು

8.ಬೆಂಕಿಗಾಹುತಿಯಾಗಿರುವ ವರ್ನಾ ಕಾರು

9,10.ಗ್ರಾಮಸ್ಥರಿಂದ ಧರ್ಮದೇಟು ತಿಂದ ಯುವಕರು.

Share this article