ಧರ್ಮರಾಯಸ್ವಾಮಿ-ದ್ರೌಪತಮ್ಮದೇವಿ ಕರಗ ಮಹೋತ್ಸವ

KannadaprabhaNewsNetwork |  
Published : May 03, 2026, 01:15 AM IST
ದೊಡ್ಡಬಳ್ಳಾಪುರದಲ್ಲಿ ಶ್ರೀಧರ್ಮರಾಯಸ್ವಾಮಿ -ದ್ರೌಪತಮ್ಮ ದೇವಿ ಕರಗ ಮಹೋತ್ಸವ ಸಂಭ್ರಮದಿಂದ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಪಾರಂಪರಿಕ ಉತ್ಸವಗಳಲ್ಲಿ ಪ್ರಮುಖವಾದ ಶ್ರೀಧರ್ಮರಾಯಸ್ವಾಮಿ ದೇವಾಲಯದ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ಕರಗ ಮಹೋತ್ಸವ ಬುದ್ದಪೂರ್ಣಿಮೆಯ ರಾತ್ರಿ ಸಂಭ್ರಮದಿಂದ ನೆರವೇರಿತು

ದೊಡ್ಡಬಳ್ಳಾಪುರ: ಇಲ್ಲಿನ ಪಾರಂಪರಿಕ ಉತ್ಸವಗಳಲ್ಲಿ ಪ್ರಮುಖವಾದ ಶ್ರೀಧರ್ಮರಾಯಸ್ವಾಮಿ ದೇವಾಲಯದ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ಕರಗ ಮಹೋತ್ಸವ ಬುದ್ದಪೂರ್ಣಿಮೆಯ ರಾತ್ರಿ ಸಂಭ್ರಮದಿಂದ ನೆರವೇರಿತು.

ಶುಕ್ರವಾರ ತಡರಾತ್ರಿ ವೇಳೆಗೆ ಇಲ್ಲಿನ ಚಿಕ್ಕಪೇಟೆಯಲ್ಲಿರುವ ಶ್ರೀಧರ್ಮರಾಯಸ್ವಾಮಿ ದೇವಾಲಯದಿಂದ ಹೊರಬಂದ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡಿಕ್ರಾಸ್ ಮುಖ್ಯರಸ್ತೆಯಲ್ಲಿರುವ ಗಗನಾರ್ಯ ಮಠದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳ ಬಳಿಕ ದೇಗುಲಕ್ಕೆ ಆಗಮಿಸಿದ ಪೂಜಾರಿ ಹೊಸಕೋಟೆಯ ಉಪ್ಪಾರಹಳ್ಳಿಯ ಪೂಜಾರಿ ವೈ.ಭೀಮರಾಜ್, ಮಲ್ಲಿಗೆ ಹೂಗಳು ಮತ್ತು ಆಭರಣಾಲಂಕೃತ ಕರಗ ಕಳಶವನ್ನು ಹೊತ್ತು ದೇಗುಲದಿಂದ ಹೊರಬಂದರು.

ಬಳಿಕ ಏಳುಸುತ್ತಿನ ಕೋಟೆ, ನಾರಾಯಣ ದೇಗುಲ, ಸಪ್ತಮಾತೃಕೆ ಮಾರಿಯಮ್ಮ ದೇವಾಲಯ, ಕೋಟೆ ರಸ್ತೆ, ಸಿದ್ದಲಿಂಗಯ್ಯ ವೃತ್ತ, ನೆಲದಾಂಜನೇಯ ದೇವಾಲಯ ಮಾರ್ಗವಾಗಿ ಸಂಚರಿಸಿತು. ನೆಲದಾಂಜನೇಯಸ್ವಾಮಿ ದೇವಾಲಯ ಆವರಣ ಮತ್ತು ಟಿ.ಸಿದ್ದಲಿಂಗಯ್ಯ ವೃತ್ತದಲ್ಲಿ ಕರಗ ನೃತ್ಯ ನಡೆಯಿತು. ಏಳುಸುತ್ತಿನ ಕೋಟೆ ಅಂಗಳಲ್ಲಿ ಹೂಗಳಲ್ಲಿ ಬಿಡಿಸಲಾಗಿದ್ದ ಆಕರ್ಷಕ ರಂಗವಲ್ಲಿಯ ಮೇಲೆ ಧಾರ್ಮಿಕ ನಡಿಗೆಯ ಮೂಲಕ ಹಸಿಕರಗ ಹೊತ್ತ ಪೂಜಾರಿ ಹೆಜ್ಜೆ ಹಾಕಿದರು. ನಡುರಾತ್ರಿಯಲ್ಲಿ ನೆರೆದಿದ್ದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಕರಗ ಪೂಜಾರಿ ಮಂಗಳ ವಾದ್ಯಗಳು ಮತ್ತು ತಮಟೆ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ತಲೆಯ ಮೇಲೆ ಕರಗ ಹಾಗೂ ಕೈಯಲ್ಲಿ ಕತ್ತಿಯನ್ನು ಹಿಡಿದು ತಮಟೆಯ ಸದ್ದಿಗೆ ಹೆಜ್ಜೆ ಹಾಕುತ್ತಾ ಸಂಚರಿಸಿದ ಪೂಜಾರಿಗೆ ಮನೆಮನೆಗಳ ಮುಂದೆ ದೀಪಾರತಿಗಳನ್ನು ಬೆಳಗಿ ಮಹಿಳೆಯರು ಸಂಪ್ರದಾಯ ಮೆರೆದರು. ಪ್ರಮುಖ ವೃತ್ತಗಳಲ್ಲಿ ಆಕರ್ಷಕ ಹಸಿಕರಗ ನೃತ್ಯ ಗಮನ ಸೆಳೆಯಿತು.

ಕರಗದ ಅಂಗವಾಗಿ ಇಲ್ಲಿನ ಅನೇಕ ಗರಡಿಮನೆಗಳು, ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಕರಗ ಮಾದರಿಗಳನ್ನು ಮಾಡಿ ಪೂಜಿಸಲಾಗಿತ್ತು. ಅರವಂಟಿಕೆಗಳನ್ನು ಏರ್ಪಡಿಸಲಾಗಿತ್ತು. ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯರಸ್ತೆಗಳಲ್ಲಿ ಎಲ್ಇಡಿ ಬಲ್ಬ್ಗಳಿಂದ ರೂಪಿಸಲಾಗಿರುವ ದೇವತೆಗಳ ಪ್ರತಿಕೃತಿಗಳು ವಿಶೇಷ ಆಕರ್ಷಣೆಯಾಗಿದ್ದವು. ಎಲ್ಲೆಡೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿತ್ತು.

ಕರಗದ ಅಂಗವಾಗಿ ವಿವಿಧ ದೇವಾನು ದೇವತೆಗಳ ಉತ್ಸವವೂ ನಡೆಯಿತು. ಆಭಯ ಚೌಡೇಶ್ವರಿ ದೇಗುಲದಿಂದ ಸಾಂಸ್ಕೃತಿಕ ಉತ್ಸವದಲ್ಲಿ ಆಂಧ್ರಪ್ರದೇಶದ ವಿಖ್ಯಾತ ಕುಂಭ ಜ್ಯೋತಿಗಳು ಪಾಲ್ಗೊಂಡವು. ನಗರಾದ್ಯಂತ ವಿವಿಧ ದೇವಾಲಯಗಳು, ದರ್ಗಾಗಳಿಗೆ ಭೇಟಿ ನೀಡಿದ ಕರಗ, ಶನಿವಾರ ಬೆಳಗ್ಗೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ತಲುಪಿತು.

(ಎರಡೂ ಫೋಟೋ ಬಳಸಿ ಸರ್‌)

2ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಶ್ರೀಧರ್ಮರಾಯಸ್ವಾಮಿ -ದ್ರೌಪತಮ್ಮ ದೇವಿ ಕರಗ ಮಹೋತ್ಸವ ಸಂಭ್ರಮದಿಂದ ನಡೆಯಿತು.

2ಕೆಡಿಬಿಪಿ3 - ಶ್ರೀಧರ್ಮರಾಯಸ್ವಾಮಿ -ದ್ರೌಪತಮ್ಮ ದೇವಿ ಕರಗ ಮಹೋತ್ಸವ ಅಂಗವಾಗಿ ದೇವಾಲಯದಲ್ಲಿ ವಿಶೇಷಾಲಂಕಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸಮಸ್ಯೆ ಮುಂದುವರಿದರೆ ಬೃಹತ್‌ ಪ್ರತಿಭಟನೆ
ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದ ಬಸವಣ್ಣ: ಮಾರನಗೆರೆ ಸಂಗಮೇಶ್