ದಾಬಸ್‍ಪೇಟೆ: ಬಾಲಕಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲೂಕಿನ ಭೈರೇಗೌಡನಹಳ್ಳಿಯಲ್ಲಿ ನಡೆದಿದೆ.
ಸಂಜೆ ಪೋಷಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಮೃತದೇಹದ ಬಳಿ ಡೆತ್ ನೋಟ್ ಇದ್ದು ತೆಗೆದು ನೋಡಿದಾಗ "ಸಾರಿ ಅಪ್ಪ " ಎಂಬ ಪದದ ಜೊತೆಗೆ ಸ್ನೇಹಿತರ ಮೂರು ಮೊಬೈಲ್ ನಂಬರ್ ನಮೂದಿಸಿ, ಈ ನಂಬರ್ ಗಳಿಗೆ ಕರೆ ಮಾಡಿ ನನ್ನ ಸಾವಿನ ಸುದ್ದಿ ಮುಟ್ಟಿಸಿ ಅಂತ ಬರೆದಿದ್ದಾಳೆ.
ಎಸ್ಸೆಸ್ಸೆಲ್ಸಿಯಲ್ಲಿ ಶೇ. 83 ಅಂಕ: ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.83 ಅಂಕ ಪಡೆದಿದ್ದಳು. ನಾವು ಮೆಡಿಕಲ್ ಓದಿಸಬೇಕು ಅಂತ ಕನಸು ಹೊತ್ತಿದ್ದೆವು. ಆದರೆ ಅವಳಿಗೆ ಎಲ್‌ಎಲ್ ಬಿ ಮಾಡಬೇಕೆಂದು ಆಸೆ ಹೊತ್ತಿದ್ದಳು. ಕಾಲೇಜಿಗೆ ದಾಖಲು ಮಾಡಲು ಕಾಲೇಜೊಂದರಲ್ಲಿ ಅಪ್ಲಿಕೇಶನ್ ಕೂಡ ತಂದಿದ್ದೆ. ಆದರೆ ಮಗಳೇ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಬಾಲಕಿ ತಂದೆ ರಾಘವೇಂದ್ರ ಅಳಲು ತೋಡಿಕೊಂಡರು.ಮೃತಳ ಅತ್ತೆ ಶೈಲಜಾ ಪ್ರತಿಕ್ರಿಯಿಸಿ ಸಂಧ್ಯಾಳ ಮೂರು ವರ್ಷಗಳಿಂದ ನಮ್ಮ ಮನೆಯಲ್ಲಿದ್ದುಕೊಂಡು ಪ್ರೌಢಶಾಲೆ ಮುಗಿಸಿದ್ದಳು. ಈಕೆ ವಿದ್ಯಾಭ್ಯಾಸದಲ್ಲೂ ಮುಂದಿದ್ದಳು. ನಮ್ಮ ಜೊತೆ ಕುಟುಂಬದವರೊಂದಿಗೂ ಲವಲವಿಕೆಯಿಂದಿದ್ದಳು. ಆದರೆ ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.