ಭಾನುವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆ ನೆರವೇರಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಬಸದಿಗೆ ಹೋಗಿ ಅಷ್ಟದ್ರವ್ಯಗಳಿಂದ ಅಷ್ಟವಿಧಾರ್ಚನೆ ಪೂಜೆ ಮಾಡಿದಾಗ ಅಷ್ಟಕರ್ಮಗಳ ನಾಶವಾಗುತ್ತದೆ. ಸಕಲಕರ್ಮಗಳ ಕ್ಷಯದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದು ಶ್ರವಣಬೆಳಗೊಳ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.ಭಾನುವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆಯಲ್ಲಿ ಭಾಗವಹಿಸಿ ಅವರು ಮಂಗಲ ಪ್ರವಚನ ನೀಡಿದರು.ದಾನ ಮತ್ತು ದೇವರ ಪೂಜೆ ಶ್ರಾವಕರ ಧರ್ಮವಾಗಿದೆ. ಗೃಹಸ್ಥರು ದಾನ, ಧರ್ಮಾದಿ ಸತ್ಕಾರ್ಯಗಳಿಂದ ಶೋಭಿಸುತ್ತಾರೆ. ದಾನದಿಂದ ದುರ್ಗತಿಯ ನಾಶವಾಗಿ ಸದ್ಗತಿ ಪ್ರಾಪ್ತವಾಗುತ್ತದೆ ಎಂದು ಅವರು ನುಡಿದರು.ತೀರ್ಥಂಕರರು ತಮ್ಮ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣ ಮಾಡಿದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕೂಡಾ ತಮ್ಮ ಅವಿರತ ಸೇವಾಕಾಯಕ ಹಾಗೂ ಲೋಕಕಲ್ಯಾಣ ಕಾರ್ಯಗಳಿಂದ ತೀರ್ಥಂಕರರಾಗುವ ಎಲ್ಲಾ ಯೋಗ್ಯತೆ ಹಾಗೂ ಮಾನ್ಯತೆ ಹೊಂದಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು.
ಸಿದ್ದವನ ಗುರುಕುಲದಲ್ಲಿ ತಮ್ಮ ಮುತ್ತಜ್ಜ ನೇಮಿಸಾಗರವರ್ಣೀಜಿಯವರ ಸ್ಮಾರಕ ನಿರ್ಮಿಸಬೇಕೆಂದು ಸ್ವಾಮೀಜಿ ಹೆಗ್ಗಡೆ ಅವರಿಗೆ ಸಲಹೆ ನೀಡಿದರು.
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪಂಚನಮಸ್ಕಾರ ಮಂತ್ರ ಪಠಣದಿಂದ ಅಪಾರ ಶಕ್ತಿ ದೊರಕಿ ನಮಗೆ ಪುಣ್ಯ ಸಂಚಯವಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಂಚನಮಸ್ಕಾರ ಮಂತ್ರ ಪಠಣದ ಬಗ್ಯೆ ವಿಶೇಷ ಉಪನ್ಯಾಸ ನೀಡಿರುವುದನ್ನು ಸ್ಮರಿಸಿದರು.ಉಭಯ ಸ್ವಾಮೀಜಿಯವರ ಪಾದಪೂಜೆ ಮಾಡಿ, ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು.ಹೇಮಾವತಿ ವೀ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಶ್ರುತಾ ಜಿತೇಶ್, ಸೋನಿಯಾ ವರ್ಮ ಇದ್ದರು.ಪ್ರಥಮ ಬಾರಿ ಧರ್ಮಸ್ಥಳ ಪುರಪ್ರವೇಶ ಮಾಡಿದ ಶ್ರವಣಬೆಳಗೊಳದ ಪೂಜ್ಯ ಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರವಣಬೆಳಗೊಳದ ಸ್ವಾಮೀಜಿ ಸಿದ್ದವನ ಗುರುಕುಲಕ್ಕೂ ಭೇಟಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.