ಧರ್ಮಸ್ಥಳ ಚಲೋ ಕಾರ್ಯಕ್ರಮ: ಪುನೀತ್ ಕೆರೆಹಳ್ಳಿ

KannadaprabhaNewsNetwork |  
Published : Aug 22, 2025, 02:00 AM IST
ಪೊಲೀಸರು ವೇದಿಕೆಯಲ್ಲಿ ತಡೆದು ಅವರಿಗೆ ನೋಟಿಸ್ ನೀಡಿ ಕರೆದುಕೊಂಡು ಹೋದ ಸಂದರ್ಭ | Kannada Prabha

ಸಾರಾಂಶ

ಜಿಲ್ಲಾಡಳಿತದ ಸರ್ಪಗಾವಲು ಭೇದಿಸಿ ತನ್ನನ್ನು ಪ್ರತಿಭಟನೆ ಕಾರ್ಯಕ್ರಮ ವೇದಿಕೆಗೆ ಹತ್ತಿಸಿದ ಸ್ಥಳೀಯ ಹಿಂದೂ ಪರ ಕಾರ್ಯಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕುಶಾಲನಗರ : ಧರ್ಮಸ್ಥಳದ ಅಪಪ್ರಚಾರ ಖಂಡಿಸಿ ಭಕ್ತವೃಂದ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ವೇದಿಕೆಗೆ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೆಹಳ್ಳಿ ದಿಢೀರ್ ವೇದಿಕೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಯತ್ನಿಸಿದಾಗ ಪೊಲೀಸ್ ಅಧಿಕಾರಿ ಸಿಬ್ಬಂದಿ ಅವರನ್ನು ತಡೆಯುವಲ್ಲಿ ಹರ ಸಾಹಸ ಪಡಬೇಕಾಯಿತು. ಪೊಲೀಸ್ ವರಿಷ್ಠಾಧಿಕಾರಿಗಳ ಮನವಿಯಂತೆ ಪುನೀತ್ ಕೆರೆಹಳ್ಳಿ ಅವರು ಕೊಡಗು ಜಿಲ್ಲೆಗೆ ಬರದಂತೆ ನಿರ್ಬಂಧಿಸಿ ಬೆಳಗ್ಗಿನಿಂದ ಗಡಿ ಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರೂ ಪುನೀತ್ ಕೆರೆಹಳ್ಳಿ, ಕುಶಾಲನಗರಕ್ಕೆ ಬಂದು ಪ್ರತಿಭಟನಾ ಸಭೆಯ ವೇದಿಕೆಗೆ ಬರುವಲ್ಲಿ ಯಶಸ್ವಿಯಾಗಿದ್ದರು.

ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅವರನ್ನು ವೇದಿಕೆಯಿಂದ ಹೊರ ತರಲು ಹರಸಾಹಸ ಪಡುತ್ತಿದ್ದ ವೇಳೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ನೆರೆದಿದ್ದ ಪ್ರತಿಭಟನಾಕಾರರು ಜೈಶ್ರೀರಾಮ್ ಘೋಷಣೆ ಮೊಳಗಿಸಿದರು. ಇದರಿಂದ ತಬ್ಬಿಬ್ಬುಗೊಂಡ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವೇದಿಕೆಯಿಂದ ಕೆಳಗಿಸಲು ಮುನ್ನುಗ್ಗಿದರು. ಈ ವೇಳೆ ಸ್ವಲ್ಪಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಕುಶಾಲನಗರ ಡಿ ವೈ ಎಸ್ ಪಿ ಚಂದ್ರಶೇಖರ್ ಮತ್ತಿತರ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನಿರ್ಬಂಧ ಆದೇಶವನ್ನು ನೀಡಿ ತಕ್ಷಣ ವೇದಿಕೆಯಿಂದ ಹೊರ ಹೋಗುವಂತೆ ಸೂಚನೆ ನೀಡಿದರು.

ಈ ಸಂದರ್ಭ ಮಾತನಾಡಿದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್ ಕೆರೆಹಳ್ಳಿ, ಪೊಲೀಸರ ಸರ್ಪಗಾವಲನ್ನು ಭೇದಿಸಿ ವೇದಿಕೆಗೆ ಕರೆತರುವಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ವ್ಯಕ್ತಿಗೆ ದಿಗ್ಬಂಧನ ಹಾಕಲು ಸಾಧ್ಯವೇ ಹೊರತು ವಿಚಾರಗಳಿಗೆ ದಿಗ್ಬಂಧನ ಸಾಧ್ಯವಿಲ್ಲ ಎಂದು ಹೇಳಿದರು.

ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಚಾರ ಎಸಗುತ್ತಿರುವ ಯುಟ್ಯೂಬರ್ ಎಂ ಡಿ ಸಮೀರ್ ಎಂಬಾತನನ್ನು ತಕ್ಷಣ ಬಂಧಿಸಬೇಕು. ಪೊಲೀಸರು ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಧರ್ಮಸ್ಥಳ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಿದರು.

ಜಿಲ್ಲಾಡಳಿತದ ಸರ್ಪಗಾವಲು ಭೇದಿಸಿ ತನ್ನನ್ನು ಪ್ರತಿಭಟನೆ ಕಾರ್ಯಕ್ರಮ ವೇದಿಕೆಗೆ ಹತ್ತಿಸಿದ ಸ್ಥಳೀಯ ಹಿಂದೂ ಪರ ಕಾರ್ಯಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ