ಕೆ.ಎಂ.ದೊಡ್ಡಿ: ಭಾರತೀನಗರದ ಸಿಎಸ್ ಸಿ ಸೇವಾ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಡಿಜಿ ಪೇ ಸೇವೆಗೆ ಚಾಲನೆ ನೀಡಲಾಯಿತು. ಶ್ರೀ ಕ್ಷೇತ್ರ ಯೋಜನಾಧಿಕಾರಿ ಎಚ್.ಕೆ.ಮಂಜುನಾಥ್ ಅವರು ಡಿಜಿ ಪೇ ಮೂಲಕ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಮೀಣ ಜನರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಚಾಲನೆ ನೀಡಿದರು. ಇದೇ ವೇಳೆ ಪ್ರಾಯೋಗಿಕವಾಗಿ ಸ್ಥಳೀಯ ಇಬ್ಬರು ಸದಸ್ಯರಿಗೆ ₹25 ಸಾವಿರ ಮೊತ್ತವನ್ನು ಡಿಜಿ ಪೇ ಮೂಲಕ ಹಣ ವರ್ಗಾವಣೆ ಮಾಡಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸೇವೆ ಒದಗಿಸುವ ದೃಷ್ಟಿಯಿಂದ ಸಂಸ್ಥೆ ವತಿಯಿಂದ ಹೊಸದಾಗಿ ಡಿಜಿ ಪೇ ಸೇವೆಯನ್ನು ಒದಗಿಸಲಾಗುತ್ತಿದೆ. ಇದರಿಂದ ಜನರು ಸಬಲೀಕರಣದತ್ತ ಹೆಜ್ಜೆ ಹಾಕಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರದ ತಾಲೂಕು ನೋಡೆಲ್ ಅಧಿಕಾರಿ ಮಧು, ವಲಯ ಮೇಲ್ವಿಚಾರಕರಾದ ಎಚ್.ಜಿ.ಅಶ್ವಿನಿ, ಸಿಎಸ್ ಸಿ ಸೇವಾದಾರರು, ಸೇವಾ ಪ್ರತಿನಿಧಿಗಳು, ರಜಿನಿ, ಸರಸ್ವತಿ, ಅಮಿತ್, ಸಂಗೀತ, ಸವಿತ ಸಂಘದ ಸದಸ್ಯರು ಉಪಸ್ಥಿತರಿದ್ದರು.