ಬಂಟ್ವಾಳ: ಯಾವುದೇ ಸರ್ಕಾರಗಳು ಮಾಡಲಾಗದ ಜನಪರ ಕೆಲಸಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡಿ ತೋರಿಸಿದ್ದು, ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸದ ಮೂಲಕ ಜನರು ಬದುಕು ಸಾಗಿಸಲು ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡ ಶಕ್ತಿಯಾಗಿದೆ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಜಿ. ಮಾತನಾಡಿ, ಹಲವು ದಶಕಗಳ ಹಿಂದೆ ಹೆಣ್ಣು ಮಕ್ಕಳ ಸ್ಥಿತಿ ಸಾಕಷ್ಟು ತೊಂದರೆಯಲ್ಲಿದ್ದು, ಅವರ ಶಿಕ್ಷಣದ ಅವಕಾಶಗಳನ್ನೂ ಕಸಿಯಲಾಗಿತ್ತು. ನಿರಂತರ ದೌರ್ಜನ್ಯಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು ಸ್ಥಿತಿ ಬದಲಾಗಿದ್ದು, ಅದರಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರವೂ ವಿಶೇಷವಾಗಿದೆ. ಜ್ಞಾನ, ವಿದ್ಯೆ, ಆರೋಗ್ಯ ಕ್ಷೇತ್ರಕ್ಕೆ ಧರ್ಮಸ್ಥಳದ ಕೊಡುಗೆ ಅಪಾರವಾಗಿದ್ದು, ಶ್ರೀ ಮಂಜುನಾಥನ ಆಶೀರ್ವಾದದಿಂದ ಎಲ್ಲ ಕಾರ್ಯಗಳು ಯಶಸ್ಸಿಯಾಗಿ ನಡೆಯುತ್ತಾ ಬಂದಿದೆ ಎಂದರು.ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಅಗತ್ಯತೆ ತಕ್ಕಂತೆ ಶಕ್ತಿಯನ್ನು ತುಂಬಿ ಸಶಕ್ತ ಸಮಾಜ ಕಟ್ಟುವ ಕಾರ್ಯವನ್ನು ಖಾವಂದರು ಹಾಗೂ ಮಾತೃಶ್ರೀ ಅಮ್ಮನವರು ಯೋಜನೆಯ ಮೂಲಕ ಕಳೆದ ೪೦ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಅಶಕ್ತ ಕುಟುಂಬಗಳಿಗೆ ಸ್ವಾಭಿಮಾನದ ಬದುಕು ನೀಡಿದ್ದಾರೆ ಎಂದರು.
ಉದ್ಯಮಿ ಹರೀಂದ್ರ ಪೈ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರೊನಾಲ್ಡ್ ಡಿಸೋಜ, ಉಡುಪಿ ಪ್ರಾದೇಶಿಕ ಕಚೇರಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಯೋಜನಾಧಿಕಾರಿ ಅಮೃತಾ, ಬಾಳ್ತಿಲ ವಾತ್ಸಲ್ಯಮಯಿ ಮಹಿಳಾ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಶೈಲಜಾ ರಾಜೇಶ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ಇಂಚರಾ ಫೌಂಡೇಶನ್ ಆಡಳಿತಾಧಿಕಾರಿ ಮಲ್ಲಿಕಾ ಬಂಗೇರ ಅವರು ಸದೃಢ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಆರೋಗ್ಯ ವಿಚಾರದ ಕುರಿತು ವಿಚಾರ ಮಂಡಿಸಿದರು.ಸಮಾರಂಭದಲ್ಲಿ ವಾತ್ಸಲ್ಯ ಕಿಟ್ ವಿತರಣೆ, ಮಾಸಾಶನ ವಿತರಣೆ, ತಾಲೂಕಿನ 5 ಅತ್ಯುತ್ತಮ ಜ್ಞಾನವಿಕಾಸ ಒಕ್ಕೂಟಗಳಿಗೆ ಗೌರವಾರ್ಪಣೆ ನಡೆಯಿತು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.