ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರ್ಥಿಕ, ಶಿಕ್ಷಣ, ಸಾಮಾಜಿಕ, ಕೃಷಿ, ಜಲ ಸಂಪನ್ಮೂಲ, ಆರೋಗ್ಯ, ಸಾಂಸ್ಕೃತಿಕ, ಸ್ವಚ್ಚತೆ, ಪರಿಸರ ನೈರ್ಮಲ್ಯ ಮುಂತಾದುವುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತ ಅಂಗಡಿ ಅಭಿಪ್ರಾಯಪಟ್ಟರು.
ಕನ್ನಡ ಪ್ರಭ ವಾರ್ತೆ ಶನಿವಾರಸಂತೆ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರ್ಥಿಕ, ಶಿಕ್ಷಣ, ಸಾಮಾಜಿಕ, ಕೃಷಿ, ಜಲ ಸಂಪನ್ಮೂಲ, ಆರೋಗ್ಯ, ಸಾಂಸ್ಕೃತಿಕ, ಸ್ವಚ್ಚತೆ, ಪರಿಸರ ನೈರ್ಮಲ್ಯ ಮುಂತಾದುವುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತ ಅಂಗಡಿ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೋಮವಾರಪೇಟೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಕೊಡ್ಲಿಪೇಟೆ ಮತ್ತು ಶನಿವಾರಸಂತೆ ವಲಯ ಹಂಡ್ಲಿ ಗ್ರಾಪಂನ ಹುಲಸೆ ಕೆರೆ ಅಭಿವೃದ್ದಿ ಸಮಿತಿ ವತಿಯಿಂದ ಹುಲಸೆ ಗ್ರಾಮದಲ್ಲಿ ಅಭಿವೃದ್ದಿಪಡಿಸಿದ 865ನೇ ನಮ್ಮೂರು ನಮ್ಮ ಕೆರೆಗೆ ಬಾಗಿನ ಅರ್ಪಣೆ ಮತ್ತು ಕೆರೆ ಹಸ್ತಾಂತರ ಕಾರ್‍ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಕ್ಷೇತ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ರೂಪಿಸಿರುವ ಹಲವಾರು ಕಾರ್‍ಯಕ್ರಮಗಳು ಮತ್ತು ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದ ಮೂಲಕ ಸಮಾಜದ ಅಭಿವೃದ್ದಿ ಗ್ರಾಮಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಕೃಷಿ ಮತ್ತು ರೈತರ ಹಿತದೃಷ್ಟಿಯಿಂದ ಗ್ರಾಮಾಭಿವೃದ್ದಿ ಸಂಸ್ಥೆಯು ರಾಜ್ಯದಲ್ಲಿ ಇದುವರೆಗೆ ಒಂದು ಸಾವಿರಕಿಂತ ಹೆಚ್ಚಿನ ಕೆರೆಗಳನ್ನು ಹೂಳೆತ್ತಿ ಅಭಿವೃದ್ದಿಪಡಿಸಿ ರೈತರ ಅನುಕೂಲಕ್ಕೆ ಹಸ್ತಾಂತರಿಸಿದೆ. ಹುಲಸೆ ಗ್ರಾಮದ ಕೆರೆಯನ್ನು 2. 80 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ದಿಪಡಿಸಿದ್ದು, ಇದರಿಂದ ಗ್ರಾಮದ 40 ರೈತ ಕುಟುಂಬಗಳು ಸೇರಿದಂತೆ 200 ಎಕರೆ ರೈತರ ಜಮೀನುಗಳಿಗೆ ನೀರು ಒದಗಿಸಿದಂತಾಗುತ್ತದೆ ಎಂದು ಹೇಳಿದರು.
ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಂಸ್ಥೆಯು ಸರಕಾರ ಮಾಡಬೇಕಿದ್ದ ಕೆಲಸಗಳನ್ನು ಮಾಡುತ್ತಿದೆ. ದುಶ್ಚಟವನ್ನು ದೂರ ಮಾಡುವಂತಹ ಸಮಾಜವನ್ನು ಜಾಗೃತಿ ಮೂಡಿಸುತ್ತಿರುವ ಕಾರ್ಯದ ಜೊತೆಯಲ್ಲಿ ಆರ್ಥಿಕ, ಶೈಕಣಿಕ, ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಶ್ರಮಿಸುತ್ತಿರುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನಿಯವಾಗಿದೆ ಎಂದರು.
ಕಾರ್‍ಯಕ್ರಮದಲ್ಲಿ ಜನಜಾಗೃತಿ ಸಮಿತಿ ಸದಸ್ಯ ಭಗವಾನ್, ಸದಸ್ಯೆ ಪೂರ್ಣಿಮಾ ಕಿರಣ್ ಮಾತನಾಡಿದರು. ಹುಲಸೆ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಭರತ್ ಹುಲಸೆ ಅಧ್ಯಕ್ಷತೆ ವಹಿಸಿದ್ದರು. ಹಂಡ್ಲಿ ಗ್ರಾಪಂ ಪಿಡಿಒ ಅಂಜನಾದೇವಿ, ಗ್ರಾಪಂ ಉಪಾಧ್ಯಕ್ಷ ಎಚ್.ಎಸ್. ಅಶೋಕ್, ಗ್ರಾಪಂ ಸದಸ್ಯ ವೀರೇಂದ್ರ ಕುಮಾರ್, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್, ಕೃಷಿ ಮೇಲ್ವಿಚಾರಕ ಹರೀಶ್, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಾಜಣ್ಣ, ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ, ಕೆರೆ ಅಭಿವೃದ್ದಿ ಸದಸ್ಯರು, ಗ್ರಾಮದ ಪ್ರಮುಖರು ಹಾಜರಿದ್ದರು. ಈ ಸಂದರ್ಭ ಮಹಿಳೆಯರು ಕೆರೆಗೆ ಬಾಗಿನ ಸಮರ್ಪಿಸಿದರು. ನಂತರ ಸಮಾರಂಭದಲ್ಲಿ ಸಂಸ್ಥೆ ಅಭಿವೃದ್ದಿಪಡಿಸಿದ ಕೆರೆಯ ದಾಖಲನ್ನು ಪಿಡಿಒ ಅಂಜನಾದೇವಿ ಮೂಲಕ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.