ಮೂಡುಬಿದಿರೆ: ಒಂದು ಕಾಲದಲ್ಲಿ ಹೆಣ್ಣು ಕೇವಲ ಅಡಿಗೆ ಕೋಣೆಗೆ ಸೀಮಿತವಾಗಿದ್ದಳು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ, ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ನಂತರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದ ನಂತರ ಹೆಣ್ಣು ಮಕ್ಕಳಿಗೆ ಶಕ್ತಿ ಬಂದಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಡುಬಿದಿರೆ ತಾಲೂಕು ಇದರ ವತಿಯಿಂದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದನ್ವಯ ಭಾನುವಾರ ಧವಲಾ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಕಾರ್ಕಳ ತಾಲೂಕಿನಲ್ಲಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರವನ್ನು ಮೂಡುಬಿದಿರೆಗೆ ವಿಸ್ತರಿಸುವಂತೆ ತಾನು ಶಾಸಕನಾಗಿದ್ದ ಸಂದರ್ಭದಲ್ಲಿ ಹೆಗ್ಗಡೆ ಬಳಿ ಮನವಿ ಮಾಡಿದ್ದೆ ಈ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಶಕ್ತಿ ತುಂಬಲಾಗಿದ್ದು ಆ ಕಾರಣದಿಂದಲೇ ಇಂದು ಹೆಣ್ಣು ಮಕ್ಕಳು ಆದಾಯ ಗಳಿಸಲು, ರಾಜಕೀಯಕ್ಕೆ ಪ್ರವೇಶಿಸಲು ಹಾಗೂ ವೇದಿಕೆಗೆ ಬಂದು ಮಾತನಾಡಲು ಸಹಕಾರಿಯಾಗಿದೆ ಎಂದರು.ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಹೇಮರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ಠಾಣೆಯ ಉಪ ನಿರೀಕ್ಷಕಿ ಪ್ರತಿಭಾ ಪೊಕ್ಸೋ ಕಾಯಿದೆ, ಸೈಬರ್ ಕ್ರೈಮ್, ಆನ್ ಲೈನ್ ವಂಚನೆ,ಡಿಜಿಟಲ್ ಸ್ಕ್ಯಾಮ್ ಬಗ್ಗೆ ಮಾಹಿತಿ ನೀಡಿದರು.