ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನೇಕ ವರ್ಷಗಳಿಂದ ರಾಜ್ಯದ ಹೈನುಗಾರಿಕೆ ಬಲವರ್ಧನೆಗೊಳ್ಳಲು ಡಾ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಡೇರಿ ಕಟ್ಟಡ ನಿರ್ಮಾಣ ಮಾಡಲು 1.50 ಲಕ್ಷದಿಂದ 3 ಲಕ್ಷದವರೆಗೆ ಸಹಾಯಧನ ನೀಡುತ್ತಾ ಬರಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಡೇರಿ ಕಟ್ಟಡ ನಿರ್ಮಾಣ ಮಾಡಲು ಹೆಚ್ಚು ಸಹಕಾರಿಯಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ರಾಜ್ಯದಲ್ಲಿ ಹೈನುಗಾರಿಕೆ ಸೇರಿ ಹಲವು ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಒಟ್ಟು 511 ಕಾಮಗಾರಿಗಳಿಗೆ ₹8.05 ಕೋಟಿ ಅನುದಾನ ಕೊಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕರಾದ ಲೀಲಾವತಿ ತಿಳಿಸಿದರು.ಶ್ರವಣಬೆಳಗೊಳ ಯೋಜನಾ ಕಚೇರಿ ವ್ಯಾಪ್ತಿಯ ಹೋಬಳಿಯ ಕಲ್ಕೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ವತಿಯಿಂದ ನೀಡಲಾಗಿದ್ದ 2 ಲಕ್ಷ ಸಹಾಯಧನದ ಡಿಡಿಯನ್ನು ಸಂಘದ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನೇಕ ವರ್ಷಗಳಿಂದ ರಾಜ್ಯದ ಹೈನುಗಾರಿಕೆ ಬಲವರ್ಧನೆಗೊಳ್ಳಲು ಡಾ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಡೇರಿ ಕಟ್ಟಡ ನಿರ್ಮಾಣ ಮಾಡಲು 1.50 ಲಕ್ಷದಿಂದ 3 ಲಕ್ಷದವರೆಗೆ ಸಹಾಯಧನ ನೀಡುತ್ತಾ ಬರಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಡೇರಿ ಕಟ್ಟಡ ನಿರ್ಮಾಣ ಮಾಡಲು ಹೆಚ್ಚು ಸಹಕಾರಿಯಾಗುತ್ತಿದೆ ಎಂದರು.ಹೈನುಗಾರಿಕೆ ಶಿಕ್ಷಣ ಕೆರೆ ಅಭಿವೃದ್ಧಿ ಕೃಷಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಗ್ರಾಮಾಭಿವೃದ್ಧಿ ವತಿಯಿಂದ ಪ್ರತಿ ವರ್ಷವೂ ಅನುದಾನ ಕೊಡುವ ಮೂಲಕ ಹೆಚ್ಚಿನ ಸಹಕಾರ ನೀಡುತ್ತಾ ಬರಲಾಗುತ್ತಿದೆ. ಕೃಷಿ ಯಂತ್ರಧಾರೆಯ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಯಂತ್ರೋಪಕರಣಗಳ ಬಾಡಿಗೆ ನೀಡಲಾಗುತ್ತಿದೆ.
ಯೋಜನೆಯ ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ವೃತ್ತಿಪರ ಕೋರ್ಸ್ ಗಳಿಗೆ ಶಿಷ್ಯವೇತನ ಹಾಗೂ ವಯೋವೃದ್ಧ ಅಬಲರಿಗೆ ಪ್ರತಿ ತಿಂಗಳು ಮಾಸಾಶನ ಹಾಗೂ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡುವುದು ಸೇರಿದಂತೆ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.ಕಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಮ್ಮ ರಮೇಶ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡೇರಿ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ ರು. ಸಹಾಯಧನದ ಅನುದಾನ ನೀಡಲಾಗಿದೆ. ವೀರೇಂದ್ರ ಹೆಗ್ಗಡೆಯವರು ರಾಜ್ಯದಲ್ಲಿ ದೇವಾಲಯಗಳ ಹಾಗೂ ಡೇರಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸಿನ ನೆರವು ನೀಡುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಹೊಸ ಡೇರಿ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರು ಹಾಸನ ಹಾಲು ಒಕ್ಕೂಟ ಕೆಎಂಎಫ್ ವತಿಯಿಂದ ಹೆಚ್ಚಿನ ಅನುದಾನ ಕೊಡಿಸಿದ್ದಾರೆ. ಹೈನುಗಾರಿಕೆ ಇಂದು ದೊಡ್ಡ ಉದ್ಯಮವಾಗಿ ಬೆಳೆಯಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನಯವಾದದ್ದು ಎಂದರು. ಈ ಸಂದರ್ಭದಲ್ಲಿ ಶ್ರವಣಬೆಳಗೊಳ ಯೋಜನಾಧಿಕಾರಿ ಕೆ ಪುರಂದರ, ಸಂಘದ ಅಧ್ಯಕ್ಷ ಮಂಜುಳಾ ತಿಮ್ಮೇಗೌಡ, ಸಾವಯವ ಕೃಷಿಕ ಗಣೇಶ್, ಕಲ್ಕೆರೆ ವಲಯದ ಮೇಲ್ವಿಚಾರಕರಾದ ರಮೇಶ್, ಕೃಷಿ ಮೇಲ್ವಿಚಾರಕ ಲಿಂಗರಾಜು, ಸೇವಾ ಪ್ರತಿನಿಧಿ ಮಂಜೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಮತ್ತು ಸಂಘದ ಸದಸ್ಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.