ಹೈಕೋರ್ಟ್ ಸಂಚಾರಿ ಪೀಠ ಮಲೆನಾಡಿಗರ ಬಹುಕಾಲದ ಬೇಡಿಕೆ: ಚಂದ್ರಕಾಂತ್ ಪಾಟೀಲ್

KannadaprabhaNewsNetwork |  
Published : May 24, 2026, 01:45 AM IST
ಪತ್ರಿಕಾಗೋಷ್ಠಿಯಲ್ಲಿ  ಹೈಕೋರ್ಟ್ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮಾತನಾಡಿದರು | Kannada Prabha

ಸಾರಾಂಶ

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಮಲೆನಾಡಿನ ಜನತೆಯ ಬಹು ಕಾಲದ ಬೇಡಿಕೆಯಾಗಿದ್ದು, ಈ ದಿಸೆಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿರುವ ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೇರ್ಪಡೆಗೊಳಿಸದಂತೆ ಹೈಕೋರ್ಟ್ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಮಲೆನಾಡಿನ ಜನತೆಯ ಬಹು ಕಾಲದ ಬೇಡಿಕೆಯಾಗಿದ್ದು, ಈ ದಿಸೆಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿರುವ ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೇರ್ಪಡೆಗೊಳಿಸದಂತೆ ಹೈಕೋರ್ಟ್ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಆಗ್ರಹಿಸಿದರು.

ಶನಿವಾರ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಹೆಬ್ಬಾಗಿಲು ಎಂಬ ಹಿರಿಮೆ ಹೊಂದಿರುವ ಶಿವಮೊಗ್ಗ ನಗರ ಭೌಗೋಳಿಕವಾಗಿ ಮದ್ಯ ಕರ್ನಾಟಕದ ಕೇಂದ್ರ ಸ್ಥಳವಾಗಿದ್ದು, ಅಕ್ಕಪಕ್ಕದ 5-6 ಜಿಲ್ಲೆಗಳಿಗೆ ಸಮೀಪದಲ್ಲಿರುವ ಎಲ್ಲ ರೀತಿಯ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.

ಸಾರ್ವಜನಿಕರ ಹಿತಾಸಕ್ತಿಗಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭಕ್ಕೆ ಸುದೀರ್ಘ ಕಾಲದಿಂದ ಬೇಡಿಕೆ ಇದ್ದು, ಈಗಾಗಲೇ ಧಾರವಾಡ ಹಾಗೂ ಕಲ್ಬುರ್ಗಿಯಲ್ಲಿ ಸಂಚಾರಿ ಪೀಠ ಆರಂಭವಾಗಿ ಶಿವಮೊಗ್ಗಕ್ಕೆ ಮಂಜೂರಾತಿ ದೊರೆಯುವ ಎಲ್ಲ ರೀತಿಯ ನಿರೀಕ್ಷೆ ಹೊಂದಿದ್ದ ಸಂದರ್ಭದಲ್ಲಿ ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೇರ್ಪಡೆಗೊಳಿಸುವ ಮಾಹಿತಿ ಲಭ್ಯವಾಗಿದೆ ಎಂದ ಅವರು, ಶಿವಮೊಗ್ಗಕ್ಕೆ ಪ್ರತ್ಯೇಕ ಸಂಚಾರಿ ಪೀಠಕ್ಕಾಗಿ ಜಿಲ್ಲೆಯ 18 ಹಿರಿಯ ವಕೀಲರ ಜತೆ ಚರ್ಚಿಸಿ ಮಂಗಳೂರಿಗೆ ಸೇರ್ಪಡೆಗೊಳಿಸುವ ಪ್ರಸ್ಥಾವನೆಯನ್ನು ಕೈಬಿಟ್ಟು ಶಿವಮೊಗ್ಗದಲ್ಲಿ ಆರಂಭಿಸಲು ಎಲ್ಲ ರೀತಿಯ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮಂಗಳೂರು ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೇರ್ಪಡೆಗೊಳಿಸುವುದು ಅವೈಜ್ಞಾನಿಕ ಕ್ರಮವಾಗಿದ್ದು, ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣಾಗಲಿದ್ದಾರೆ. ವಿಮಾನ, ರೈಲ್ವೆ, ಬಸ್ ಮತ್ತಿತರ ಸಮರ್ಪಕ ವ್ಯವಸ್ಥೆ ಹೊಂದಿರುವ ಶಿವಮೊಗ್ಗದಲ್ಲಿ ಸಂಚಾರಿ ಪೀಠದ ಆರಂಭದಿಂದ ಸುತ್ತಮುತ್ತಲಿನ ಹಲವು ಜಿಲ್ಲೆ ಜನತೆಗೆ ಅನುಕೂಲವಾಗಲಿದೆ ಎಂದ ಅವರು, ಮಂಗಳೂರು ಪ್ರಸ್ತಾವಿತ ಸಂಚಾರಿ ಪೀಠಕ್ಕೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಇತ್ತೀಚೆಗೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಜತೆ ಹಿರಿಯ ನ್ಯಾಯವಾದಿ ಬಸಪ್ಪಗೌಡ್ರು, ಶ್ರೀಪಾಲ್ ಮತ್ತಿತರರ ಜತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿರುವುದಾಗಿ ತಿಳಿಸಿದರು.

ಶಿವಮೊಗ್ಗದಲ್ಲಿ ಸಂಚಾರಿ ಪೀಠ ಆರಂಭಕ್ಕೆ ಕೇವಲ ನ್ಯಾಯವಾದಿಗಳ ಒತ್ತಡ ಮಾತ್ರವಲ್ಲದೆ, ಸಾರ್ವಜನಿಕರ, ಸಂಘ ಸಂಸ್ಥೆಗಳ ಒತ್ತಡ ಬಹುಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಚಾರಿ ಪೀಠಕ್ಕಾಗಿ ತುರ್ತು ಆಂದೋಲನ ರೂಪುಗೊಳ್ಳಬೇಕು, ಜಿಲ್ಲೆಯ ಪ್ರತಿ ತಾಲೂಕಿನಿಂದ ಕೂಗು, ಒತ್ತಡದಿಂದ ಮಾತ್ರ ಕಾರ್ಯ ಸಾದ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ವಿಶ್ವ ಮಾನವ ಹಕ್ಕುಗಳ ಸಂಸ್ಥೆ ತಾ.ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ನಾಗರಾಜ್, ಪುಟ್ಟಪ್ಪ, ಕಾರ್ಯದರ್ಶಿ ಪ್ರಕಾಶ್, ಚಂದ್ರು, ಮೂರ್ತಿ, ಗೋವಿಂದ ನಾಯ್ಕ, ನ್ಯಾಯವಾದಿ ಮಧು ಹುಲ್ಮಾರ್, ಮನೋಜ್ ವಿ.ಕೆ, ಸುರೇಶ್ ತಟ್ಟಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳವಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಎಚ್.ನಾಗೇಶ್ ಅಧ್ಯಕ್ಷ
ದುಡಿಯುವ ವರ್ಗ ಜಾತಿ, ಧರ್ಮ ಮೀರಿ ಒಂದಾಗಬೇಕು: ಜಿ.ಎನ್.ನಾಗರಾಜ್