ಮಹಿಳೆಯರಿಗೂ ಮತದಾನದ ಹಕ್ಕು ಇರಲಿಲ್ಲ. ಆದರೆ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು ಒದಗಿಸಿದರು ಎಂದು ತಿಳಿಸಿದರು. ಹಣವನ್ನು ಯಾರಾದರೂ ಕಸಿದುಕೊಳ್ಳಬಹುದು, ಆದರೆ ಶಿಕ್ಷಣವನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಭಯಪಡಬಾರದು. ಧೈರ್ಯ ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ಸಾಧನೆ ಸಾಧ್ಯ. ಸಾಮಾನ್ಯ ಕುಟುಂಬದಿಂದ ಬಂದ ನಾನು ಎದುರಾಳಿಗಳಿಗೆ ಹೆದರಿ ಹಿಂದೆ ಸರಿದಿದ್ದರೆ ಶಾಸಕನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ತಮ್ಮ ಬದುಕಿನ ಅನುಭವವನ್ನು ಹಂಚಿಕೊಂಡರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ವಿದ್ಯಾರ್ಥಿಗಳು ದೇಶಭಕ್ತಿ, ರಾಷ್ಟ್ರೀಯತೆ ಹಾಗೂ ಆತ್ಮವಿಶ್ವಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ರೆಡ್ ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್ ಘಟಕಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬಹುತೇಕ ಸಮಯವನ್ನು ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು. ದಿನಕ್ಕೆ ಹತ್ತು ಗಂಟೆಗೂ ಹೆಚ್ಚು ಕಾಲ ಓದಿನಲ್ಲಿ ತೊಡಗಿಸಿಕೊಂಡಿದ್ದ ಅವರು, ಭಾರತದಲ್ಲಿದ್ದ ಅಸಮಾನತೆಯನ್ನು ನಿರ್ಮೂಲನೆ ಮಾಡಬೇಕೆಂಬ ದೃಢ ಸಂಕಲ್ಪ ಹೊಂದಿದ್ದರು ಎಂದು ಹೇಳಿದರು.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು, ಶಿಕ್ಷಣದ ಹಕ್ಕು ಹಾಗೂ ರಾಜಕೀಯ ಹಕ್ಕುಗಳು ದೊರಕಿದವು. ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಕಲ್ಪಿಸುವ ಮೂಲಕ ಸಮಾನತೆಯ ಸಂದೇಶವನ್ನು ಅವರು ನೀಡಿದ್ದಾರೆ. ಹಿಂದಿನ ಕಾಲದಲ್ಲಿ ಶ್ರೀಮಂತರು, ಜಮೀನುದಾರರು ಹಾಗೂ ಪ್ರಭಾವಿಗಳಿಗೆ ಮಾತ್ರ ಮತದಾನದ ಅವಕಾಶವಿದ್ದು, ಮಹಿಳೆಯರಿಗೂ ಮತದಾನದ ಹಕ್ಕು ಇರಲಿಲ್ಲ. ಆದರೆ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು ಒದಗಿಸಿದರು ಎಂದು ತಿಳಿಸಿದರು. ಹಣವನ್ನು ಯಾರಾದರೂ ಕಸಿದುಕೊಳ್ಳಬಹುದು, ಆದರೆ ಶಿಕ್ಷಣವನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಭಯಪಡಬಾರದು. ಧೈರ್ಯ ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ಸಾಧನೆ ಸಾಧ್ಯ. ಸಾಮಾನ್ಯ ಕುಟುಂಬದಿಂದ ಬಂದ ನಾನು ಎದುರಾಳಿಗಳಿಗೆ ಹೆದರಿ ಹಿಂದೆ ಸರಿದಿದ್ದರೆ ಶಾಸಕನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ತಮ್ಮ ಬದುಕಿನ ಅನುಭವವನ್ನು ಹಂಚಿಕೊಂಡರು.ಈ ಕಾಲೇಜಿನಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶವನ್ನು ಪ್ರೀತಿಸಬೇಕು ಹಾಗೂ ರಾಷ್ಟ್ರೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಖರೀದಿಗೆ ಆದ್ಯತೆ ನೀಡಿದರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಮಾತನಾಡಿ, ಕಾಲೇಜು ಜೀವನವೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಹಂತವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಕುರಿತು ಉಡಾಫೆ ತೋರದೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಹನಾ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಮಾಜಿ ಪುರಸಭಾ ಸದಸ್ಯ ಪ್ರದೀಪ್, ವಕೀಲ ಸುಧೀಶ್, ಸಮಾಜ ಸೇವಕ ಕೌಶಿಕ್, ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.