ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಇದರಂತೆ ರಾಜ್ಯದ ೨೦,೧೦೦ ಅಸಹಾಯಕ ವ್ಯಕ್ತಿಗಳಿಗೆ ಪ್ರತೀ ತಿಂಗಳು ಈ ಮಾಸಾಶನ ತಲುಪಿಸಿ ಅವರ ಜೀವನ ನಿರ್ವಹಣೆಗೆ ಬೆಳಕಾಗಿದೆ ಮತ್ತು ಕಾರ್ಯಕರ್ತರಿಂದ ಸಾಂತ್ವನ ಹಾಗೂ ಯೋಗ ಕ್ಷೇಮ ವಿಚಾರಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಹಲವಾರು ಕಾರಣಗಳಿಗೆ ತಮ್ಮ ವೃದ್ಧಾಪ್ಯದ ದಿನಗಳಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದೇ ಅನಾಥರಾಗಿರುವ ಅದೆಷ್ಟೋ ಹಿರಿ ಜೀವಗಳನ್ನು ಗಮನಿಸಬಹುದು. ತಮ್ಮ ಇಳಿ ವಯಸ್ಸಿನಲ್ಲಿ ನಡೆದಾಡಲು ಸಾಧ್ಯವಾಗದೇ, ದುಡಿಯಲು ಸಾಧ್ಯವಾಗದೇ ಜೀವನ ನಿರ್ವಹಣೆ ಹಾಗೂ ಒಪ್ಪೊತ್ತಿನ ಊಟಕ್ಕೂ ಪರದಾಡುವವರನ್ನು ಕಾಣುತ್ತೇವೆ. ದೈನಂದಿನ ಜೀವನ ನಿರ್ವಹಣೆಯ ಸಮಸ್ಯೆಯ ಜೊತೆಗೆ ಇವರು ವಯೋ ಸಹಜವಾದ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನೂ ಕಾಣುತ್ತೇವೆ. ಇಂಥವರಿಗಾಗಿಯೇ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ‘ಮಾಸಾಶನ’ದ ಕಾರ್ಯಕ್ರಮ ಜಾರಿಗೆ ತಂದರು. ದುಡಿಯಲು ಶಕ್ತಿಯಿಲ್ಲದೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ಯೋಜನೆಯಿಂದ ಮಾಸಾಶನ ನೀಡುವ ವ್ಯವಸ್ಥೆ ಇದಾಗಿದೆ.ಸಲಕರಣೆಗಳ ವಿತರಣೆ:
ಈ ಕಾರ್ಯಕ್ರಮದಲ್ಲಿ ಗಾಲಿಕುರ್ಚಿ (ವೀಲ್ ಚಯರ್), ಶೌಚಾಲಯದ ಬಳಕೆಗಾಗಿ ಗಾಲಿಕುರ್ಚಿ (ಕಮೋಡ್ ವೀಲ್ ಚಯರ್), ನೀರಹಾಸಿಗೆ (ವಾಟರ್ ಬೆಡ್), ನಡುಗೋಲು (ಯು ಶೇಪ್ ವಾಕರ್), ಮೊಣಕೈ ಊರುಗೋಲು (ಎಲ್ಬೋ ಕ್ರಚಸ್), ಊರುಗೋಲು (ಆಕ್ಸಿಲರಿ ಕ್ರಚಸ್), ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್), ಮೂರುಕಾಲಿನ ಕೈಗೋಲು (ತ್ರಿ ಲೆಗ್ ವಾಕಿಂಗ್ ಸ್ಟಿಕ್) ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.
ಈ ಕಾರ್ಯಕ್ರಮದನ್ವಯ ೨೦೨೪-೨೫ನೇ ವರ್ಷದಲ್ಲಿ ೪,೫೦೦ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ಉಚಿತವಾಗಿ ಪೂರೈಸಿದ್ದು ಇಲ್ಲಿಯವರೆಗೆ ೩೨,೦೦೦ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.