ಕನ್ನಡಪ್ರಭ ವಾರ್ತೆ ಮಡಿಕೇರಿ
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಉದ್ಘಾಟಿಸಿ ಮಾತನಾಡಿ ಸಕಾಲ, ಆರ್‌ಟಿಐ, ಸೇವಾಸಿಂಧು ಯೋಜನೆಗಳಿಂದ ಸಾರ್ವಜನಿಕರಿಗೆ ಸರ್ಕಾರಿ ಇಲಾಖೆಗಳ ಕಡತ/ ದಾಖಲೆಗಳನ್ನು ಸುಲಭವಾಗಿ ಪಡೆಯಲು ಮುಕ್ತ ಅವಕಾಶವಿದೆ. ಇಂತಹ ಸಂದರ್ಭದಲ್ಲಿ ದೈನಂದಿನ ಕಚೇರಿ ಕಡತಗಳ ನಿರ್ವಹಣೆ ಅಗತ್ಯವಾಗಿದೆ. ಸರ್ಕಾರಿ ಕಡತಗಳನ್ನು ಸಾರ್ವಜನಿಕ ಉದ್ದೇಶದಿಂದ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕರಾದ ಡಾ.ಗವಿಸಿದ್ದಯ್ಯ ಮಾತನಾಡಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ನಾಡು ನುಡಿಗೆ ಸಂಬಂಧಿಸಿದ ಐತಿಹಾಸಿಕ ಮಹತ್ವದ ದಾಖಲೆ ಸಂಗ್ರಹಿಸಿ ಸಂರಕ್ಷಣೆ ಮಾಡುತ್ತ ಬರುತ್ತಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಎಲ್ಲಾ ಇಲಾಖೆಯ ಕಚೇರಿಗಳ ಕಡತಗಳ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಾರ್ವಜನಿಕ ದಾಖಲೆಗಳ ಅಧಿನಿಯಮ-ಜಾರಿಗೊಳಿಸಲಾಗಿದೆ.ಈ ಅಧಿನಿಯಮ ಮತ್ತು ನಿಯಮವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ರಾಜ್ಯ ಪತ್ರಾಗಾರ ಇಲಾಖೆ ಇಂತಹ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಶಿಬಿರಾರ್ಥಿಗಳು ತಮ್ಮ ದೈನಂದಿನ ಕರ್ತವ್ಯ ನಿರ್ವಹಣೆಯಲ್ಲಿ ಅಧಿನಿಯಮ ಮತ್ತು ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಸಾರ್ವಜನಿಕರಿಗೆ ಹಾಗೂ ಮುಂದಿನ ಪೀಳಿಗೆಗೆ ಅವಶ್ಯವೆನಿಸುವ ದಾಖಲೆಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರಿ ನೌಕರರ ಕರ್ತವ್ಯವಾಗಿರುವುದರಿಂದ ಹಾಗೂ ಕಡತಗಳ ನಿರ್ವಹಣೆಗಾಗಿ ಸಾರ್ವಜನಿಕ ದಾಖಲೆಗಳ ಅಧಿನಿಯಮ ಜಾರಿಗೊಳಿಸಿರುವುದರಿಂದ ದೈನಂದಿನ ಕಚೇರಿ ಕಡತಗಳ ನಿರ್ವಹಣೆಯಲ್ಲಿ ನಿಯಮಗಳನ್ನು ಪಾಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಅವರು ವಿವರಿಸಿದರು.
ರಾಜ್ಯ ಪತ್ರಾಗಾರ ಇಲಾಖೆ ಐತಿಹಾಸಿಕ ಮಹತ್ವದ ದಾಖಲೆಗಳ ನಿರ್ವಹಣೆ ಮಾಡುತ್ತಿದೆ. ಪತ್ರಾಗಾರ ಸಂಗ್ರಹದಲ್ಲಿರುವ ದಾಖಲೆಗಳು ಸಾರ್ವಜನಿಕರಿಗೆ, ಸರ್ಕಾರಿ ಇಲಾಖೆಯವರಿಗೆ ಹಾಗೂ ಸಂಶೋಧಕರುಗಳಿಗೆ ಉಪಯೋಗವಾಗುತ್ತಿದೆ. ಇಂದಿನ ಕಡತಗಳು ಮುಂದಿನ ಪೀಳಿಗೆಗೆ ಹಾಗೂ ಚರಿತ್ರೆಯ ಬರವಣಿಗೆಗೆ ಐತಿಹಾಸಿಕ ದಾಖಲೆಗಳಾಗಿ ಬಳಕೆಯಾಗುತ್ತವೆ. ಹಾಗಾಗಿ ನಾವು ಪ್ರತಿದಿನ ಆರಂಭಿಸುವ ಕಡತಗಳು ಮುಂದಿನ ತಲೆಮಾರಿಗೆ ಉಪಯುಕ್ತವಾಗಲಿವೆ. ಆ ಕಾರಣಕ್ಕಾಗಿ ಅವುಗಳ ನಿರ್ವಹಣೆಯ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಿದ್ದು ಇದರ ಸದುಪಯೋಗವನ್ನು ತಾವೆಲ್ಲ ಪಡೆಯಬೇಕು ಎಂದು ಕೋರಿದರು.
ಪತ್ರಾಗಾರ ಇಲಾಖೆ ಉಪ ನಿರ್ದೇಶಕರಾದ ಡಾ.ನೆಲ್ಕುದ್ರಿ ಸದಾನಂದ ಅವರು ದಾಖಲೆಗಳ ವರ್ಗೀಕರಣ ಮತ್ತು ಅವಧಿ ಮೀರಿದ ಕಡತಗಳ ನಾಶಪಡಿಸುವಿಕೆಯ ನಿಯಮಗಳ ಕುರಿತು ವಿವರಿಸಿದರು.