ಧರ್ಮಸ್ಥಳ: ಕೂಡಲೇ ಎಸ್‌ಐಟಿ ತನಿಖೆ ನಿಲ್ಲಿಸಿ

KannadaprabhaNewsNetwork |  
Published : Aug 12, 2025, 12:30 AM IST
ಪೋಟೊ: 11ಎಸ್ಎಂಜಿಕೆಪಿ 06ಧರ್ಮಸ್ಥಳ  ಕ್ಷೇತ್ರದ ವಿರುದ್ಧ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು. ಕಳಂಕ ಅಂಟಿಸಲು ಯತ್ನಿಸುತ್ತಿರುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು. ಕಳಂಕ ಅಂಟಿಸಲು ಯತ್ನಿಸುತ್ತಿರುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಶಿವಮೊಗ್ಗ: ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು. ಕಳಂಕ ಅಂಟಿಸಲು ಯತ್ನಿಸುತ್ತಿರುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಸೀನಪ್ಪ ಶೆಟ್ಟಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪುವ ಮೂಲಕ ಸಂಪನ್ನಗೊಂಡಿತು. ಪ್ರತಿಭಟನೆ ವೇಳೆ ಭಕ್ತರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಮತ್ತು ಡಾ.ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರವನ್ನು ಹಿಡಿದು ಮೆರವಣಿಗೆ ನಡೆಸಿದರು. ಕ್ಷೇತ್ರದ ವಿರುದ್ಧದ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯೂಟ್ಯೂಬರ್‌ಗಳು ಸೇರಿದಂತೆ ಅನಾಮಿಕ ವ್ಯಕ್ತಿ, ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ತಿಮರೋಡಿ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಧರ್ಮಸ್ಥಳ ಮತ್ತು ಡಾ.ವೀರೇಂದ್ರ ಹೆಗ್ಗಡೆ ಅವರ ಪರ ಘೋಷಣೆ ಮೊಳಗಿಸಿದರು.

ಈ ವೇಳೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅರಣ್ಯ ವ್ಯಾಪ್ತಿಯಲ್ಲಿ ಹೆಣ ಹೂತಿದ್ದೇನೆ ಅಂದಾಗಲೆ ಆನಾಮಿಕನನ್ನು ಬಂಧಿಸಬೇಕಿತ್ತು. ಈತನಕ ಯಾಕೆ ಆತನ ಬಂಧನವಾಗಿಲ್ಲ? ದಿನಕ್ಕೊಂದು ಕಡೆ ಅಗೆಸುತ್ತಿದ್ದಾನೆ. ಮುಂದೆ ಮುಖ್ಯಮಂತ್ರಿ ಮನೆಯಲ್ಲು ಹೂತಿದ್ದೇನೆ ಎಂದು ತೋರಿಸಬಹುದು. ಅದನ್ನು ಸರ್ಕಾರ ಒಡೆಯುತ್ತದೆಯೆ? ಈಗ ಅನಾಮಿಕ ತೆಗೆಸಿರುವ ಗುಂಡಿಗಳಲ್ಲಿ ಎಡಪಂಥೀಯರನ್ನು ಹೂಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಭೂಮಿಯಲ್ಲಿ ಶವ ಹೂತಿರುವುದಾಗಿ ಹೇಳುತ್ತಿರುವ ವ್ಯಕ್ತಿಯನ್ನು ಇನ್ನೂ ಬಂಧಿಸಲಿಲ್ಲ. ಇದು ಅರಣ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು. ಸರ್ಕಾರ ಹಿಂದೂ ಸಮಾಜವನ್ನು ಕಡೆಗಣಿಸುತ್ತಿದೆ. ಮಂಜುನಾಥನ ಭಕ್ತರು ಈಗ ಜಾಗೃತರಾಗಿದ್ದಾರೆ. ಸರ್ಕಾರ ದೇವಸ್ಥಾನವನ್ನು ವಶಕ್ಕೆ ಪಡೆಯಲು ಯತ್ನಿಸಿದರೆ, ಆ ಸರ್ಕಾರವೇ ಇರುವುದಿಲ್ಲ ಎಂದು ಎಚ್ಚರಿಸಿದರು.

ಎಡಪಂಥೀಯರು ದೇವಸ್ಥಾನವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ವೀರೇಂದ್ರ ಹೆಗ್ಗಡೆಯವರು ಹಲವಾರು ಸಮಾಜಸೇವೆಗಳನ್ನು ಮಾಡುತ್ತಿದ್ದಾರೆ. ಬಡವರ ಮತಾಂತರವನ್ನು ತಡೆದಿದ್ದಾರೆ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ, ಕೆರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಅವರಿಗೆ ಸಹಿಸಲಾಗುತ್ತಿಲ್ಲ. ಕೂಡಲೇ ಎಸ್‌ಐಟಿ ತನಿಖೆ ನಿಲ್ಲಿಸಿ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ನಾವೆಲ್ಲ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಸುಭಿಕ್ಷವಾಗಿದ್ದೇವೆ. ಅದರೆ ಅನಾಮಿಕನ ಆಟದಿಂದ ಧರ್ಮಸ್ಥಳದ ಭಕ್ತರಿಗೆ ನೋವಾಗಿದೆ. ಈಗ ಬಾಹುಬಲಿ ಗುಡ್ಡದ ಬಳಿ ಅಗೆಯುವಂತೆ ಹೇಳುತ್ತಿದ್ದಾನೆ. ಮುಂದೆ ಈತ ಅಣ್ಣಪ್ಪಸ್ವಾಮಿ ಬಳಿಯೂ ಬೆರಳು ತೋರಿಸಬಹುದು. ಸಿಎಂ, ಗೃಹ ಸಚಿವರು ಮಧ್ಯಪ್ರವೇಶಿಸಬೇಕು. ಕೂಡಲೇ ಆತನಿಗೆ ಮಂಪರು ಪರೀಕ್ಷೆ ನಡೆಸಬೇಕು. ಆ ಬಳಿಕ ಶೋಧ ಕಾರ್ಯ ಮುಂದುವರೆಸಲಿ. ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ತೊಂದರೆ ನೀಡುತ್ತಿರುವವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಪ್ರಮುಖ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ, ಮಗು ಜನಿಸಿದಾಗ ಅದರ ಕೂದಲು ತೆಗೆಸುವುದಕ್ಕೆ ಧರ್ಮಸ್ಥಳಕ್ಕೆ ಹೋಗುತ್ತೇವೆ. ಬದುಕಿನ ಆರಂಭವೇ ಧರ್ಮಸ್ಥಳದಿಂದ ಆಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಅವರು ಸಾವಿರಾರು ಹಿಂದೂ ದೇಗುಲಗಳ ಜೀರ್ಣೋದ್ಧಾರ ಮಾಡಿದ್ದಾರೆ. ಈಗ ಅವರನ್ನು ಜೈನ ಧರ್ಮಿಯ ಎಂದು ಕೆಲವರು ಕರೆಯುತ್ತಿದ್ದಾರೆ. ಅವರ ಹೆಸರು ಹಿಡಿದು ಮಾತನಾಡುವ ಮಟ್ಟಕ್ಕೆ ಕೆಲವರು ಬಂದಿದ್ದಾರೆ. ಹಿಂದು ನಾಯಕರು, ಮಠಾಧೀಶರು ಇಂತಹ ನಡೆಯನ್ನು ಖಂಡಿಸಬೇಕು ಎಂದರು.

ವೇದಿಕೆಯ ಪ್ರಮುಖರಾದ ಶಾಂತ ಸುರೇಂದ್ರ ಮಾತನಾಡಿ, ಧರ್ಮಸ್ಥಳದ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಮೂಳೆ ಸಿಗುತ್ತದೆ ಎಂದು ಹೇಳಿ ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆಗೆ ಪ್ರತಿ ದಿನ 1.5 ಲಕ್ಷ ರು. ವೆಚ್ಚ ಮಾಡುತ್ತಿದೆ. ಇದು ನಮ್ಮ ತೆರಿಗೆ ಹಣದ ದುರುಪಯೋಗ. ಅಂತಹ ಪಿತೂರಿ ನಡೆಸುತ್ತಿರುವವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಗೆ ಹುಂಚದ ಶ್ರೀ ಹೊಂಬುಜ ಜೈನ ಮಠದ ಭಕ್ತರು, ಜೈನ್ ಮಿಲನ್, ದಿಗಂಬರ ಜೈನ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಬೆಂಬಲ ನೀಡಿದ್ದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಯಶೋಧರ ಹೆಗ್ಗಡೆ, ಕೆ.ಈ.ಕಾಂತೇಶ್, ವಿಜಯಕುಮಾರ್ ದಿನಕರ್, ಮೋಹನ್ ಶೆಟ್ಟಿ, ಯಶೋಧರ ಹೆಗ್ಗಡೆ, ಎಸ್.ದತ್ತಾತ್ರಿ, ಧನಕೀರ್ತಿ, ನಿತ್ಯಾನಂದ ಕೆಂದಾಳೆಬೈಲು ಸೇರಿದಂತೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ