ಬೆಳ್ತಂಗಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ 1971ರ ಇಂಡೋ ಪಾಕ್ ಯುದ್ದದಲ್ಲಿ ಭಾಗವಹಿಸಿದ್ದ ವೀರ ಯೋಧ ಸಿ. ಜಾರ್ಜ್ ಕುಟ್ಟಿ ಅವರನ್ನು ಧರ್ಮಸ್ಥಳ ಗ್ರಾಮದ ಅವರ ಮನೆಗೆ ತೆರಳಿ ಸನ್ಮಾಸಲಾಯಿತು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು ಮಾತನಾಡಿ, ಸಂಘಟನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಮಾಜಿ ಸೈನಿಕರನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ ಹಾಗೂ ಮಾಜಿ ಸೈನಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾ ಸಮ್ಮೇಳನದ ಸಂದರ್ಭ ನಿವೃತ್ತ ಯೋಧ ಸಿ. ಜಾರ್ಜ್ ಕುಟ್ಟಿ ಅವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ ಇಂದು ಅವರ ಮನೆಗೆ ಬಂದು ಸನ್ಮಾನಿಸುವ ಕಾರ್ಯ ಮಾಡಿದ್ದೇವೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಜಾರ್ಜ್ ಕುಟ್ಟಿ, 1964 ರಲ್ಲಿ ಸೇನೆಗೆ ಸೇರ್ಪಡೆಯಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದಾಗಿ ತಿಳಿಸಿ, ಇಂಡೋ ಪಾಕ್ ಯುದ್ದದ ದಿನಗಳನ್ನು ನೆನಪಿಸಿಕೊಂಡರು.ಈ ಸಂದರ್ಭ ಸಂಘಟನೆ ತಾಲೂಕು ಅಧ್ಯಕ್ಷ ಎನ್.ಪಿ. ತಂಗಚ್ಚನ್, ತಾಲೂಕು ಕಾರ್ಯದರ್ಶಿ ಸುರೇಶ್ ಗೌಡ, ಜಿಲ್ಲಾ ಕೋಶಾಧಿಕಾರಿ ಚಂದಪ್ಪ ಡಿ.ಎಸ್. ಜಿಲ್ಲಾ ಸಲಹೆಗಾರ ಹರೀಶ್ ರೈ, ತಾಲೂಕು ಉಪಾಧ್ಯಕ್ಷ ರವಿಪ್ರಸಾದ್, ತಾಲೂಕು ಸಮಿತಿ ಗೌರವಾಧ್ಯಕ್ಷ ಎ.ಜೆ. ಮಾಣಿ, ಗೌರವ ಸಲಹೆಗಾರ ಜೋಸೆಫ್ ಎನ್.ಕೆ., ಸಿ. ಜಾರ್ಜ್ ಕುಟ್ಟಿ ಅವರ ಪುತ್ರ ನಿವೃತ್ತ ಸೈನಿಕ ರಾಜೇಶ್, ನಿವೃತ್ತ ಸೈನಿಕರ ಕುಟುಂಬಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.