ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಭಿವೃದ್ಧಿಗೆ ವರದಾನ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಶಿಕ್ಷಣ, ಆರೋಗ್ಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಬೌದ್ಧಿಕ ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿಗಾಗಿ ಸಂಕಲ್ಪ

ಕಾರವಾರ: ತಾಲೂಕಿನ ಮಾಜಾಳಿ ವಿಶ್ವಕರ್ಮ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ತಾಲೂಕಿನ ಸದಾಶಿವಗಡ ವಲಯದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಸದಾಶಿವಗಡ ವಲಯ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ ಅಧ್ಯಕ್ಷ ರಾಜು ತಾಂಡೇಲ್‌ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ಮಾಡುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಿದೆ. ಸ್ವ-ಸಹಾಯ ಸಂಘಗಳ ಮೂಲಕ ಜನರಿಗೆ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದರಿಂದ ಜನರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರ ಜತೆಗೆ ಜನರ ಸ್ವಾವಲಂಭನೆ ಮತ್ತು ಅಭಿವೃದ್ಧಿಗೆ ವರದಾನವಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ವಿಭಾಗದ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 1982 ರಲ್ಲಿ ಜನ ಕಾರ್ಯಕರ್ತರ ಮೂಲಕ ಬಂದು ಗ್ರಾಮದಲ್ಲಿ ಪ್ರಾರಂಭ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ಇಡೀ ಕರ್ನಾಟಕ ರಾಜ್ಯದ ಮನೆ ಮನೆಗಳಲ್ಲಿ ಮನೆ ಮಾತಾಗಿದೆ. ಶಿಕ್ಷಣ, ಆರೋಗ್ಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಬೌದ್ಧಿಕ ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿ ಸ್ವಸಹಾಯ ಸಂಘ, ವಿಕಲಚೇತನರಿಗೆ ಉಪಕರಣ ವಿತರಣೆ, ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ, ಆಪತ್ತಿನಲ್ಲಿದ್ದವರಿಗೆ ಶೌರ್ಯ ವಿಪತ್ತು ಕಾರ್ಯಕ್ರಮ, ಧಾರ್ಮಿಕ ನಂಬಿಕೆಗೆ ಪೂಕರವಾಗಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು.

ಇದೇ ವೇಳೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾತಿಯಾದ ವ್ಹೀಲ್‌ಚೇರ್‌ ಹಾಗೂ ಅಸ್ನೋಟಿ ಗ್ರಾಮದ ರುದ್ರ ಭೂಮಿ ಅಭಿವೃದ್ಧಿಗೆ ಮಂಜೂರಾದ ₹ 2.50 ಲಕ್ಷದ ಪತ್ರವನ್ನು ಜಿಲ್ಲಾ ನಿರ್ದೇಶಕ ಬಾಬು ಅವರು ರಾಜು ತಾಂಡೆಲ್‌ ಅವರಿಗೆ ಹಸ್ತಾಂತರಿಸಿದರು.

ಸಾಮೂಹಿಕ ಸತ್ಯ ನಾರಾಯಣ ಪೂಜೆ ಸಮಿತಿಯ ಅಧ್ಯಕ್ಷೆ ಸುಜಾತಾ ವೆರ್ಣೇಕರ, ಮಾಜಾಳಿ ಗ್ರಾಪಂ ಮಾಜಿ ಅಧ್ಯಕ್ಷ ಚಂದನ ಸಾವಂತ, ಯೋಜನೆಯ ಯೋಜನಾಧಿಕಾರಿ ವಿನಾಯಕ ನಾಯ್ಕ, ವಲಯದ ಮೇಲ್ವಿಚಾರಕ ಶಂಭು ಪಟಗಾರ, ಕೃಷಿ ಮೇಲ್ವಿಚಾರಕ ಭಾಸ್ಕರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಜಾತಾ ಇದ್ದರು.

Share this article