ರಾಜ್ಯಾದ್ಯಂತ ಶುದ್ಧಜಲ ಜಾಗೃತಿ ಅಭಿಯಾನ: ಡಾ. ಮಂಜುನಾಥ್

KannadaprabhaNewsNetwork |  
Published : Jan 06, 2024, 02:00 AM IST
ಶುದ್ಧಜಲ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಶುದ್ಧಜಲ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ರಾಜ್ಯಾದ್ಯಂತ ಜನವರಿ ತಿಂಗಳಲ್ಲಿ ಶುದ್ಧಜಲ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಸುಮಾರು 1 ಲಕ್ಷ ಜನರಿಗೆ ಶುದ್ಧಜಲ ಬಳಕೆಯ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್‌ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಧಿಕಗೊಂಡ ಜನಸಂಖ್ಯೆ ಹಾಗೂ ಪರಿಸರ ನಾಶದ ಪರಿಣಾಮದಿಂದ ನೀರಿನ ಅಭಾವ ತಲೆದೋರಿದ್ದು ಶುದ್ಧ ಕುಡಿಯುವ ನೀರನ್ನು ಜನರಿಗೆ ಪೂರೈಸುವುದು ಕಷ್ಟಕರವಾಗಿ ಪರಿಣಮಿಸಿದೆ. ರಾಜ್ಯದ ಹಲವಾರು ಹಳ್ಳಿಗಳಲ್ಲಿ ಜನರು ಇಂದೂ ಕೂಡ ಜಾನುವಾರುಗಳನ್ನು, ಬಟ್ಟೆಬರೆಗಳನ್ನು ತೊಳೆಯಲು ಕೆರೆ, ಬಾವಿಗಳನ್ನೇ ಕುಡಿಯುವ ನೀರಿಗಾಗಿ ಆಶ್ರಿತವಾಗಿರುವುದನ್ನು ಕಾಣುತ್ತೇವೆ. ರಾಜ್ಯದ ಶೇ. 60ರಷ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ಶೇ. 20ರಷ್ಟುಅಧಿಕ ನೈಟ್ರೇಟ್ ಹಾಗೂ ಶೇ. 30ರಷ್ಟು ಸೂಕ್ಷ್ಮಾಣುಗಳಿಂದ ಕಲುಷಿತವಾಗಿ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ರಾಜ್ಯದ ಬೆಳಗಾವಿ, ಬೀದರ್, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕಲಬುರ್ಗಿ, ಹಾಸನ, ಹಾವೇರಿ, ಗದಗ, ಕೋಲಾರ, ತುಮಕೂರು, ಕೊಪ್ಪಳ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಈ ಫ್ಲೋರೈಡ್ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ.

ರಾಜ್ಯದ ವಿವಿಧೆಡೆಯಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಂದ ಫ್ಲೋರೈಡ್ ಹಾಗೂ ಅಶುದ್ಧ ನೀರಿನಿಂದಾಗುತ್ತಿರುವ ಸಮಸ್ಯೆಯನ್ನು ಕೇಳಿ ತಿಳಿದುಕೊಂಡ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕರ್ನಾಟಕದಲ್ಲಿ ಪ್ರಥಮವಾಗಿ ಸಮುದಾಯ ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡರು. ಇದರಂತೆ 2009ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ಮೊದಲ ಶುದ್ಧಕುಡಿಯುವ ನೀರಿನ ಘಟಕವನ್ನು ಹೇಮಾವತಿ ವಿ. ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು.

‘ಶುದ್ಧಗಂಗಾ’ ಎಂಬ ಹೆಸರಿನಲ್ಲಿ ಇದುವರೆಗೆ ರಾಜ್ಯಾದ್ಯಂತ 437 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರತಿ ನಿತ್ಯ ಸುಮಾರು 5,02,605 ಜನರು ಶುದ್ಧನೀರನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ 20 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ. ಯೋಜನೆಯ ಈ ಮಹತ್ತರ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ ಎಂದರು. ಅಭಿಯಾನದಲ್ಲಿ ಏನೇನು ಇರಲಿದೆ: ಶುದ್ಧಜಲ ಬಳಕೆಯ ಕುರಿತಂತೆ ಜನ ಸಾಮಾನ್ಯರಿಗೆ ಅರಿವಿನ ಕೊರತೆಯಿದೆ. ಇದಕ್ಕಾಗಿ ಜನವರಿ ತಿಂಗಳಾದ್ಯಂತ ಶುದ್ಧಜಲ ಜಾಗೃತಿ ಅಭಿಯಾನವನ್ನು ಶುದ್ಧಗಂಗಾ ಘಟಕಗಳಿರುವ ಪ್ರದೇಶದ ಜನರಿಗೆ ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ ಕಾರ್ಯಕ್ರಮ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳಲ್ಲಿ ಮಾಹಿತಿ ಹಾಗೂ ಮನೆಮನೆಗೆ ತೆರಳಿ ನೋಂದಾವಣೆ ಮೊದಲಾದ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಘಟಕ ಮೇಲ್ವಿಚಾರಕರು, ಪ್ರೇರಕರು, ಸ್ಥಳೀಯ ಕಾರ್ಯಕರ್ತರು ಹಾಗೂ ಪ್ರಗತಿಬಂಧು ಒಕ್ಕೂಟದ ಸದಸ್ಯರು ತೊಡಗಿಕೊಳ್ಳಲಿದ್ದಾರೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್‌.ಎಚ್‌. ಮಂಜುನಾಥ್‍ ತಿಳಿಸಿದರು.ಈ ಸಂದರ್ಭದಲ್ಲಿ ಶುದ್ಧಜಲ ಅಭಿಯಾನದ ಕರಪತ್ರವನ್ನು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ
ಹೊಲಗಳಲ್ಲಿ ಚರಗ ಚೆಲ್ಲಿ ಹಬ್ಬ ಆಚರಿಸಿದ ಅನ್ನದಾತರು