ತುಂಗಭದ್ರಾ ಜಲಾಶಯ ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾಪಾಡಬೇಕಾಗಿದೆ
ಕಾರಟಗಿ: ಕನ್ನಡ ನಾಡಿನ ಜೀವನಾಡಿ ತುಂಗಭದ್ರಾ ನದಿ ಮತ್ತು ಜಲಾಶಯದ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಯಾನದ ತಾಲೂಕು ಸಂಚಾಲಕ ಪ್ರಭು ಉಪನಾಳ ಹೇಳಿದರು.
ಪಟ್ಟಣಕ್ಕೆ ಡಿ.೨೭ರಂದು ಆಗಮಿಸಲಿರುವ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯ ಕುರಿತು ಪೂರ್ವಭಾವಿ ಜನಜಾಗೃತಿ ರಥಯಾತ್ರೆ ಪಟ್ಟಣಕ್ಕೆ ಗುರುವಾರ ಸ್ವಾಗತಿಸಿಕೊಂಡು ಮಾತನಾಡಿದರು.ತುಂಗಭದ್ರಾ ಜಲಾಶಯ ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾಪಾಡಬೇಕಾಗಿದೆ.ಜಲಾಶಯದ ಜತೆಗೆ ಜನರ, ಲಕ್ಷಾಂತರ ಜೀವರಾಶಿಗಳ ಬದುಕಿನ ಪ್ರಶ್ನೆ ಎದುರಾಗಿದೆ. ಹೀಗಾಗಿ ನದಿಯ ಮೌಲ್ಯ ಹಾಗೂ ಸಂರಕ್ಷಣೆಯ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಜವಾಬ್ದಾರಿಯಿದ್ದು ಸಂಘಟಿತರಾಗಿ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಅಭಿಯಾನದಿಂದ ಡಿ.೨೭ರಿಂದ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಅಭಿಯಾನವು ಡಿ. ೨೭ರಂದು ರಾತ್ರಿ ಪಟ್ಟಣಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದು, ಡಿ. ೨೮ರಂದು ಬೆಳಗ್ಗೆ ಸಾರ್ವಜನಿಕ ಸಭೆ ನಡೆಸಲಾಗುತ್ತಿದೆ ಎಂದರು.
ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್ ಮಾತನಾಡಿ,ನಮ್ಮೆಲ್ಲರ ಜೀವನಾಡಿಯಾಗಿರುವ ತುಂಗಭದ್ರಾ ನದಿಯು ಇಂದು ಮಿತಿಮೀರಿದ ಮಾಲಿನ್ಯದಿಂದ ಅಲ್ಲಿನ ನೀರನ್ನು ಕುಡಿಯಲು ಕೂಡಾ ಯೋಗ್ಯವಿಲ್ಲದಂತಹ ದುಸ್ಥಿತಿಗೆ ದೂಡಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ನಾವೆಲ್ಲರೂ ನಿರ್ಮಲ ತುಂಗಭದ್ರೆಗಾಗಿ, ಅದರ ಸ್ವಚ್ಛತೆಗೆ ಹೋರಾಡಬೇಕಿದೆ. ಆ ಮೂಲಕ ಭವಿಷ್ಯದ ಜನಾಂಗಕ್ಕೂ ಅದರ ನೀರನ್ನು ಮುಟ್ಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿ, ಜಲ ಜಾಗೃತಿಗಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಈಶಪ್ಪ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಸದಸ್ಯ ಹಿರೇಬಸಪ್ಪ ಸಜ್ಜನ್ ಮತ್ತು ವೀರೇಶ ಮುದಗಲ್, ಯುವ ಮುಖಂಡ ಮೌನೇಶ ದಢೇಸ್ಗೂರು, ರಾಜಶೇಖರ ಆನೆಹೊಸೂರು, ಪ್ರಹ್ಲಾದ್ ಜೋಷಿ, ಸಿ.ಪುರುಷೋತ್ತಮ, ಶಿವಸ್ವಾಮಿ ಸೋಮನಾಳ, ರುದ್ರೇಶ ಮಂಗಳೂರು, ಅಯ್ಯಪ್ಪ ಉಪ್ಪಾರ, ಬೂದಿ ಪ್ರಭುರಾಜ್, ಮಂಜುನಾಥ ಮಸ್ಕಿ, ದೇವರಾಜ ನಾಯಕ ಸೇರಿದಂತೆ ಇತರರಿದ್ದರು.