ಜಮೀನುಗಳಿಗೆ ತೆರಳಿ ಹೊಲಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜೆ

ಕುಷ್ಟಗಿ: ಫಸಲು ತುಂಬಿದ ಭೂದೇವಿಗೆ ಪೂಜೆಗೈದು ಸೀಮಂತ ಕಾರ್ಯದೊಂದಿಗೆ ಚರಗ ಚೆಲ್ಲುವ ಮೂಲಕ ತಾಲೂಕಿನ ರೈತರು ಅರ್ಥಪೂರ್ಣವಾಗಿ ಎಳ್ಳ ಅಮವಾಸ್ಯೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಈ ಅಮವಾಸ್ಯೆಯು ಉತ್ತರ ಕರ್ನಾಟಕ ಭಾಗದ ರೈತರ ಮನೆಗಳಲ್ಲಿ ಹಬ್ಬದ ಸಂಭ್ರಮ ತರುವಂತದ್ದಾಗಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು, ಮುದೇನೂರು, ತಾವರಗೇರಾ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ರೈತರು ಹಬ್ಬದ ಅಂಗವಾಗಿ ಕುಟುಂಬ ಸಮೇತರಾಗಿ ಎತ್ತಿನಗಾಡಿ, ಟ್ರ್ಯಾಕ್ಟರ್‌, ವಿವಿಧ ವಾಹನಗಳ ಮೂಲಕ ವಿಶೇಷ ತಿಂಡಿ, ತಿನಿಸುಗಳೊಂದಿಗೆ ತಮ್ಮ ಜಮೀನುಗಳಿಗೆ ತೆರಳಿ ಹೊಲಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.

ರೈತಾಪಿ ಮಹಿಳೆಯರು ಬೆಳಗ್ಗೆ ಎದ್ದು ಮಡಿ ಉಡಿಯಿಂದ ಎಳ್ಳು,ಶೇಂಗಾ ಹೋಳಿಗೆ, ಎಣ್ಣೆಗಾಯಿ ಪಲ್ಯ, ಹೆಸರು ಕಾಳಿನ ಪಲ್ಯ, ಚಪಾತಿ, ಮೊಸರನ್ನ ಇತ್ಯಾದಿ ಪದಾರ್ಥ ಮಾಡಿಕೊಂಡು ಕುಟುಂಬ ಸಮೇತರಾಗಿ ಹೊಲಗಳಿಗೆ ತೆರಳಿದರು. ಅಲ್ಲಿ ಭೂದೇವಿಗೆ ಪೂಜೆ ಮಾಡಿ, ಫಸಲು ತುಂಬಿದ ಹೊಲಗಳಲ್ಲಿ ಚರಗ ಚೆಲ್ಲುವ ಮೂಲಕ ಹಬ್ಬ ಆಚರಿಸಿ ಗ್ರಾಮೀಣ ಸೊಗಡಿನ ಆಹಾರ ಹೊಲದಲ್ಲಿ ಕುಟುಂಬದೊಂದಿಗೆ ಸೇವಿಸಿ ಸಂಭ್ರಮಿಸಿದರು.

ಭೂದೇವಿಗೆ ಸೀಮಂತ: ಪ್ರಸ್ತುತ ಚಳಿಗಾಲವಿದ್ದು, ಈ ಭಾಗದ ಎರೆ ಹೊಲಗಳಲ್ಲಿ ಹೆಚ್ಚಾಗಿ ಬಿಳಿಜೋಳ, ಕಡಲೆಕಾಯಿ ಇತ್ಯಾದಿ ಬೆಳೆ ಹಿಂಗಾರು ಬೆಳೆಗಳಾಗಿ ಬೆಳೆಯುತ್ತಾರೆ. ಬಯಲು ಸೀಮೆಯ ಚಳಿಗೆ ಈ ಬೆಳೆಗಳು ಫಸಲು ನೀಡುತ್ತವೆ. ಈಗ ಬೆಳೆಗಳು ಫಸಲು ನೀಡುವ ಸಮಯ. ಹಾಗಾಗಿ ಭೂಮಿ ತಾಯಿ ಸಮೃದ್ಧವಾಗಿ ಬೆಳೆ ಕರುಣಿಸಲಿ ಎಂದು ಎಳ್ಳು, ಶೇಂಗಾ ಹೋಳಿಗೆ, ಇತ್ಯಾದಿ ನೈವೇದ್ಯ ಪದಾರ್ಥಗಳನ್ನು ಚರಗ ಚೆಲ್ಲುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇದೆ ಎನ್ನುತ್ತಾರೆ ಹಿರಿಯರು.

ಎತ್ತುಗಳಿಗೆ ಶೃಂಗಾರ:ಎಳ್ಳ ಅಮವಾಸ್ಯೆ ರೈತರ ಪ್ರಮುಖ ಹಬ್ಬವಾದ ಹಿನ್ನೆಲೆಯಲ್ಲಿ ರೈತರು ಎತ್ತುಗಳಿಗೆ ವಿಶೇಷವಾಗಿ ಶೃಂಗಾರ ಮಾಡುವ ಮೂಲಕ ಅವುಗಳಿಗೆ ಝೂಲ, ಕೋಡಣಸು, ಗೊಂಡೆ, ಹಣೆಕಟ್ಟುಗಳಿಂದ ಶೃಂಗರಿಸುವುದು ಒಂದು ವಿಶೇಷವಾಗಿರುತ್ತದೆ. ಎತ್ತುಗಳು ಕೊರಳಿಗೆ ಮತ್ತು ಹಣೆಗೆಜ್ಜೆ ನುಡಿಸುತ್ತ ಹೊಲಗಳ ಕಡೆಗೆ ಬಂಡಿ ಹೊಡೆದುಕೊಂಡು ಸಾಗುವುದು ಗ್ರಾಮೀಣ ಸೊಗಡು ಕಂಡು ಬಂದಿತು.

ಭಾವೈಕ್ಯತೆ ಸಾರುವ ಹಬ್ಬ:ಇದು ರೈತರ ಪ್ರಮುಖ ಹಬ್ಬವಾಗಿದ್ದು, ಜಾತಿ, ಮತ ಭೇದವಿಲ್ಲ. ಒಕ್ಕಲುತನ ಅವಲಂಬಿಸಿರುವ ಹಿಂದೂ, ಮುಸ್ಲಿಂ ಕುಟುಂಬಗಳೂ ಎಳ್ಳ ಅಮವಾಸ್ಯೆಯ ಅಂಗವಾಗಿ ಹೊಲಕ್ಕೆ ಹೋಗಿ ಚರಗ ಚೆಲ್ಲುವ ಮೂಲಕ ರೈತರು ಜಾತಿಬೇಧ ಮರೆತು ಎಲ್ಲ ಸಹೋದರ ಸಹೋದರಿಯರಂತೆ ಜಮೀನಿನಲ್ಲಿ ಒಂದೆ ಕಡೆ ಕುಳಿತುಕೊಂಡು ವಿಶೇಷ ಭೋಜನ ಸವಿಯುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದರು.