)
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಕುರಿತು ಅನಾಮಿಕ ದೂರುದಾರ ನೀಡಿದ ದೂರಿನಂತೆ ಕಳೆದ ಹತ್ತು ದಿನಗಳಿಂದ ನೇತ್ರಾವತಿ ಸ್ನಾನಘಟ್ಟ ಪರಿಸರದಲ್ಲಿ ಎಸ್‌ಐಟಿ ವತಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಆದರೆ ಗುರುವಾರ ಯಾವುದೇ ರೀತಿಯ ಶೋಧಕಾರ್ಯ ನಡೆಯಲಿಲ್ಲ. ಇದಕ್ಕೆ ಸರಿಯಾದ ಕಾರಣವೂ ತಿಳಿದುಬಂದಿಲ್ಲ.
ಪ್ರತಿದಿನ ಪೂರ್ವಾಹ್ನ 11 ಗಂಟೆಗೆ ಎಸ್‌ಐಟಿ ಕಚೇರಿಗೆ ಆಗಮಿಸುತ್ತಿದ್ದ ದೂರುದಾರ ಗುರುವಾರ ಮಧ್ಯಾಹ್ನ 1ರ ಸುಮಾರಿಗೆ ಆಗಮಿಸಿದ್ದು, ಸಂಜೆ 4ರ ಸುಮಾರಿಗೆ ಹಿಂದಿರುಗಿದ್ದಾನೆ.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಮಧ್ಯಾಹ್ನ 2ಕ್ಕೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು. ಬಳಿಕ ಕಾರ್ಯಾಚರಣೆ ನಡೆಯುವ ನಿರೀಕ್ಷೆ ಇತ್ತು. ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಕೂಡ ಸಮಯಕ್ಕೆ ಸರಿಯಾಗಿ ತಾಲೂಕು ಕಚೇರಿಗೆ ಬಂದಿದ್ದರು. ಎಸ್‌ಐಟಿ ಮುಖ್ಯಸ್ಥರು ಆಗಮಿಸಿದ ಬಳಿಕ ಸಂಜೆಯವರೆಗೂ ಎಸ್‌ಐಟಿ ಕಚೇರಿಯಲ್ಲಿ ಮುಂದಿನ ಪ್ರಕ್ರಿಯೆಗಳ ಕುರಿತು ಸಭೆ ನಡೆದಿದೆ ಎನ್ನಲಾಗಿದೆ.
13ನೇ ಸ್ಥಳ ಉತ್ಖನನ ಬಾಕಿ:
ಕಳೆದ ಎರಡು ದಿನಗಳಿಂದ ನೇತ್ರಾವತಿ-ಅಜೆಕುರಿ ರಸ್ತೆ ಸಮೀಪದ ಕಿಂಡೀ ಅಣೆಕಟ್ಟಿನ ಬಳಿ ಇರುವ 13ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆದಿಲ್ಲ. ಇದು ಅತ್ಯಂತ ಸೂಕ್ಷ್ಮ ಸ್ಥಳವಾಗಿದ್ದು, ಸಮೀಪವೇ ಕಿಂಡಿ ಅಣೆಕಟ್ಟು, ವಿದ್ಯುತ್ ಪರಿವರ್ತಕ, ಲೈನ್ ಇದ್ದು ಇಲ್ಲಿ ಶೋಧ ಕಾರ್ಯ ಕ್ಲಿಷ್ಟಕರವಾಗಿದೆ. ಇದುವರೆಗೂ ಈ ಸ್ಥಳದಲ್ಲಿ ಶೋಧ ಕಾರ್ಯಕ್ಕೆ ಯಾವುದೇ ಪೂರ್ವ ತಯಾರಿ ನಡೆಸಿಲ್ಲ.ನಿಯೋಜಿತ ಪೊಲೀಸರು ಈ ಸ್ಥಳದಲ್ಲಿ ಪಹರೆ ನಡೆಸುತ್ತಿದ್ದು ಗುರುತಿಸಲಾದ ಸ್ಥಳದಲ್ಲಿ ಟೇಪ್ ಸುತ್ತಿ ಸಂಖ್ಯೆಯನ್ನು ನೀಡಲಾಗಿದೆ. ಈ ಸ್ಥಳದಲ್ಲಿ ಶೋಧ ಕಾರ್ಯ ಯಾಕೆ ತಡವಾಗುತ್ತಿದೆ ಹಾಗೂ ಇಂದು ಶೋಧ ಕಾರ್ಯ ನಡೆಯಲಿದೆಯೇ ಎಂಬ ವಿಚಾರ ಸ್ಪಷ್ಟೀಕರಣ ಲಭಿಸಿಲ್ಲ.