ಸಿಡಿಪಿಒ, ಮೇಲ್ವಿಚಾರಕಿ ಅಮಾನತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

KannadaprabhaNewsNetwork | Published : Nov 13, 2024 12:49 AM

ಸಾರಾಂಶ

ಕರ್ನಾಟಕ ರಾಜ್ಯ ಅಂಗನವಾಡಿ ಹಾಗೂ ಸಹಾಯಕಿಯರ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದ ಪಿಲೇಕೆಮ್ಮ ನಗರದ ಅಂಗನವಾಡಿ ಕೇಂದ್ರ ಸಂಖ್ಯೆ 1 ಕಾರ್ಯಕರ್ತೆ ಶಾಂತಾ ಮಾಮನಿ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕಾರ್ಯಕರ್ತೆಯರ ಮಧ್ಯೆ ಜಗಳ ಹಚ್ಚಿರುವ ಸಿಡಿಪಿಒ ಶಿವಮೂರ್ತಿ ಕುಂಬಾರ ಹಾಗೂ ಮೇಲ್ವಿಚಾರಕಿ ಶಾಂತಾ ಗುಮಶೆಟ್ಟಿ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಹಾಗೂ ಸಹಾಯಕಿಯರ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ನೀಲಮ್ಮ ಪಾಟೀಲ(ಬೋರಾವತ್) ಮಾತನಾಡಿ, ಶಾಂತಾ ಮಾಮನಿ ಅವರು ಕಾನೂನು ಬದ್ಧವಾಗಿ ಅಲ್ಲಿನ ನಿವಾಸಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಲೇ ಬಂದಿದ್ದರು. ಆದರೆ, ಯಾಕೋ ಏನೋ ಸಿಡಿಪಿಒ ಅವರಿಗೆ ಶಾಂತಾ ಅವರನ್ನು ಇಲ್ಲಿಂದ ಕಿತ್ತಾಕಿ ರೇಣುಕಾ ಎಂಬ ಕಾರ್ಯಕರ್ತೆಗೆ ಸಹಕಾರ ಮಾಡುವ ಉದ್ದೇಶದಿಂದ ಹೆಚ್ಚುವರಿ ಆದೇಶ ಮಾಡಿ ಮೂಲಕ ನಿಜವಾದ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿರುವ ಶಾಂತಾಗೆ ವರ್ಗಾವಣೆ ಮಾಡುವ ಮೂಲಕ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಕೇಳಲು ಹೋದ ಕಾರ್ಯಕರ್ತೆ ಶಾಂತಾ ಮಾಮನಿ ಅವರಿಗೆ ರೇಣುಕಾ ಹಾಗೂ ಸಹಾಯಕಿ, ಇಬ್ಬರು ಸೇರಿಕೊಂಡು ಹಲ್ಯೆ ಮಾಡಿ ಅಪಮಾನ ಮಾಡಿದ್ದಾರೆ. ಇದೊಂದು ಪೂರ್ವನಿಯೋಜಿತ ಶಾಂತಾ ಮಾಮನಿ ವಿರುದ್ಧ ದೂರು ದಾಖಲಿಸುವ ಕುತಂತ್ರವಾಗಿದೆ. ಈ ಘಟನೆಗೆ ಸಿಡಿಪಿಒ ಶಿವಮೂರ್ತಿ ಕುಂಬಾರ ಅವರೇ ನೇರ ಹೊಣೆಗಾರರು. ಪಿಲೇಕೆಮ್ಮ ನಗರದ ಕೇಂದ್ರ ಸಂಗಮೇಶ್ವರ ನಗರದ ಅಂಗನವಾಡಿ ಕೇಂದ್ರಕ್ಕೆ ಶಾಂತಾ ಮಾಮನಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳುವ ಇವರು ಹಾಜರು ಪಡಿಸಿಕೊಳ್ಳಬೇಕಲ್ಲವೆ ಎಂದು ಪ್ರಶ್ನಿಸಿದರು.

ಸದ್ಯ ನಮ್ಮ ಬೇಡಿಕೆಗೆ ಮೇಲಾಧಿಕಾರಿಗಳು ತಕ್ಷಣದಲ್ಲಿಯೇ ಸ್ಪಂದಿಸಿ ನ್ಯಾಯ ಸಿಗುವವರೆಗೂ ನಾವು ಧರಣಿ ಹಿಂಪಡೆಯುವ ಪ್ರಶ್ನೇಯೇ ಇಲ್ಲ ಎಂದರು.

ಈ ವೇಳೆ ಕಾರ್ಯಕರ್ತೆ ಶಾಂತಾ ಮಾಮನಿ ಮಾತನಾಡಿ, ನಾನು ಕಳೆದ 30 ವರ್ಷಗಳಿಂದ ಪಿಲೇಕೆಮ್ಮ ನಗರದ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲಿಯೂ ಯಾರಿಗೂ ಅನ್ಯಾಯ ಮಾಡಿದವಳಲ್ಲ. ಆದರೆ, ನನಗೆ ಅಲ್ಲಿನ ಪುರಸಭೆ ಸದಸ್ಯೆಯ ಪುತ್ರನಿಂದ ಕಿರುಕಳ ಆಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಹೋರಾಟ ಮಾಡಿದ್ದೇನೆ. ರೇಣುಕಾ ಕೇಂದ್ರಕ್ಕೆ ತರಬೇಕು. ನನ್ನನ್ನು ಅಲ್ಲಿಂದ ಬೇರೆ ಕಳಿಸಬೇಕು ಎಂಬುವುದು ಇವರ ದುರುದ್ದೇಶವಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತೆಯರಾದ ಶೋಭಾ ಘಾಟಗೆ, ವಿದ್ಯಾ ಮುರಾಳ, ಗುರುಬಾಯಿ ಕಾಳಗಿ, ಶೋಭಾ ಕಾಖಂಡಕಿ, ಶಮಶ್ಯಾದ ಹುಣಶ್ಯಾಳ, ನೀಲಮ್ಮ ತೊಂಡಿಹಾಳ, ಮಂಜುಳಾ ಜಾಧವ, ಅಂಬುಜಾ ಕುಲಕರ್ಣಿ, ನಿರ್ಮಲಾ ನಾಶಿ, ರಾಜೇಶ್ವರಿ ಮಮದಾಪೂರ, ಆರೀಫಾ ಸಗರ, ಜೈಬುನ್ನಿಸಾ ದಿಡ್ಡಿಮನಿ ಹಲವರು ಇದ್ದರು.

Share this article