ತಹಸೀಲ್ದಾರ್ ವಾಸುದೇವ ಎಂ.ಸ್ವಾಮಿ ಮತ್ತು ಸಿಪಿಐ ನಾಗರಾಜ ಮಾಡಳ್ಳಿ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪಿಎಸ್‌ಐ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ ಸದ್ಯಕ್ಕೆ ಧರಣಿ ಕೈಬಿಡುವಂತೆ ತಿಳಿಸಿದರು
ಲಕ್ಷ್ಮೇಶ್ವರ: ಪಟ್ಟಣದ ಪಿಎಸ್‌ಐ ಈರಣ್ಣ ರಿತ್ತಿ ಅಮಾನತ್ತಿಗೆ ಆಗ್ರಹಿಸಿ ಪಟ್ಟಣದ ಗೋಸಾವಿ ಸಮಾಜ ಮತ್ತು ಶ್ರೀರಾಮಸೇನೆಯ ಕಾರ್ಯಕರ್ತರು ಬುಧವಾರ ತಹಸೀಲ್ದಾರ್ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡರು.
ಪಿಎಸ್‌ಐ ಈರಪ್ಪ ರಿತ್ತಿ ದಸರಾ ಹಬ್ಬದ ವೇಳೆ ದುರ್ಗಾ ದೇವಿ ಮೂರ್ತಿ ವಿಸರ್ಜನೆ ವೇಳೆ ಮುಸ್ಲಿಂ ಯುವಕರು ಗೋಸಾವಿ ಸಮಾಜದ ಯುವಕರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ ಪಿಎಸ್ ಅವರಿಗೆ ಮನವಿ ಸಲ್ಲಿಸಲು ಹೋದ ಗೋಸಾವಿ ಸಮಾಜದ ಮಹಿಳೆಯರ ಹಾಗೂ ಯುವಕರ ಮೇಲೆ ಪಿಎಸ್‌ಐ ಈರಪ್ಪ ರಿತ್ತಿ ಮನ ಬಂದಂತೆ ಲಾಠಿ ಪ್ರಹಾರ ಮಾಡುವ ಮೂಲಕ ನಡೆಸಿದ್ದ ಘಟನೆ ಖಂಡಿಸಿ ಅ.19 ರಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಗೋಸಾವಿ ಸಮಾಜದವರು ಸೇರಿ ಲಕ್ಷ್ಮೇಶ್ವರ ಬಂದ್ ನಡೆಸಿ 10-12 ದಿನ ಕಳೆದರೂ ಪಿಎಸ್‌ಐ ಮೇಲೆ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಗಣೇಶೋತ್ಸವ ಆಚರಣೆ ವೇಳೆಯೂ ವಿನಾಕಾರಣ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ದ್ವೇಷ, ಹಗೆ ಸಾಧಿಸುವ ಮನೋಭಾವದ ಪಿಎಸ್‌ಐ ರಿತ್ತಿ ಅವರಿಂದ ಭಯದಲ್ಲಿ ಬದುಕುವಂತಾಗಿದೆ. ಅವರನ್ನು ಅಮಾನತ್ತು ಮಾಡಿ ಇಲ್ಲವೇ ಇಲ್ಲಿಂದ ವರ್ಗಾವಣೆಯಾದರೂ ಮಾಡಬೇಕೆಂದು ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಬೇಕಾಗಿದೆ.ನಮ್ಮ ಹೋರಾಟ ಮನವಿ ಸ್ಫಂದಿಸದಿದ್ದರೆ ದೀಪಾವಳಿ ಹಬ್ಬದ ನಂತರ ಸಾವಿರಾರು ಶ್ರೀರಾಮಸೇನೆ ಕಾರ್ಯಕರ್ತರು,ಗೊಸಾವಿ ಸಮಾಜದವರು ಸೇರಿ ಬೆಳಗಾವಿ ಸುವರ್ಣ ಸೌಧದಿಂದ ಐಜಿ ಆಫೀಸವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು ಎಂದು ಹೇಳಿದರು.ಧರಣಿಯಲ್ಲಿ ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಲ್ಲಿಕಾಜುನ ಹಾಳದೋಟದ, ಗೋವಿಂದ ಗೋಸಾವಿ, ವಿಕ್ರಂ ಗೋಸಾವಿ, ರಾಜು ಗೋಸಾವಿ, ಹನಮಂತ ರಾಮಗೇರಿ, ಕಿಶನ್ ಗೋಸಾವಿ, ವೆಂಕಟೇಶ ಗೋಸಾವಿ, ಜ್ಯೋತಿ ಗೋಸಾವಿ, ಮಂಗಳಾ ಗೋಸಾವಿ, ಅಂಜಲಿ ತುಳಸಿ, ಪೂರ್ಣಿಮಾ ಗೋಸಾವಿ, ಆಶಾ ಗೋಸಾವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಧರಣಿ ಸ್ಥಳಕ್ಕೆ ತಹಸೀಲ್ದಾರ್ ವಾಸುದೇವ ಎಂ.ಸ್ವಾಮಿ ಮತ್ತು ಸಿಪಿಐ ನಾಗರಾಜ ಮಾಡಳ್ಳಿ ಆಗಮಿಸಿ ಮಾತನಾಡಿ, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪಿಎಸ್‌ಐ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ ಸದ್ಯಕ್ಕೆ ಧರಣಿ ಕೈಬಿಡುವಂತೆ ತಿಳಿಸಿದರು.
ಈ ವೇಳೆ ಧರಣಿ ನಿರತ ಗೊಸಾವಿ ಸಮಾಜದ ಯುವಕ ಹರೀಶ ಗೋಸಾವಿ ಮತ್ತು ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ ಪ್ರತಿಕ್ರಿಯಿಸಿ ದಸರಾ ಹಬ್ಬದ ವೇಳೆ ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆ ಮಾಡಿದ ಅನ್ಯ ಕೋಮಿನ ಯುವಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಠಾಣೆಗೆ ಹೋದಾಗ ಪಿಎಸ್‌ಐ ಈರಪ್ಪ ರಿತ್ತಿ ಗೋಸಾವಿ ಸಮಾಜದ ಯುವಕರು, ಮಹಿಳೆಯರ ಮೇಲೆ ಲಾಠಿ ಪ್ರಯೋಗಿಸಿದ್ದಾರೆ. ನ್ಯಾಯ ಕೇಳಲು ಮುಂದಾದರೆ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ತಮ್ಮ ಬೆಂಬಲಿಗರ ಮೂಲಕ ಹೆದರಿಸಿ-ಬೆದರಿಸುವ ಕಾರ್ಯ ಮಾಡುತ್ತಿದ್ದಾರೆ.
ನಮಗೆ ಶಾಂತಿಯುತವಾಗಿ ಧರಣಿ ನಡೆಸಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಿದ್ದರಿಂದ ಅಧಿಕಾರಿಗಳು ಬರಿಗೈಲೆ ವಾಪಸ್ ಹೋದ ಘಟನೆ ನಡೆಯಿತು. ಮುಂಜಾಗೃತ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.