- ನ್ಯಾನೊ ಗೊಬ್ಬರ ಬಳಕೆ, ನೈಸರ್ಗಿಕ ಕೃಷಿ ಜಾಗೃತಿ ಕಾರ್ಯಕ್ರಮ
ಚನ್ನಗಿರಿ: ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಧರ್ತಿಮಾತಾ ಬಚಾವೋ ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಕೃಷಿ ಅಧಿಕಾರಿ ಮೆತಾಬ್ ಆಲಿ ಹೇಳಿದರು.
ಶುಕ್ರವಾರ ಕೃಷಿ ಇಲಾಖೆಯ ಆದೇಶದಂತೆ ತಾಲೂಕಿನ ಹಿರೇಮಳಲಿ, ಚನ್ನೇಶಪುರ, ಅಜ್ಜಿಹಳ್ಳಿ, ಇಟ್ಟಿಗೆ, ಆಗರಬನ್ನಿಹಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ರೈತ ಮಹಿಳೆಯರಿಗೆ ಸಮತೋಲನ ಗೊಬ್ಬರ ಬಳಕೆ ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿ.ಎ.ಪಿ. ಬಳಕೆ ಕುರಿತಂತೆ ಚನ್ನೇಶಪುರ ಗ್ರಾಮದಲ್ಲಿ ನಡೆದ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನ್ಯಾನೊ ಗೊಬ್ಬರಗಳ ಪ್ರಯೋಜನದಿಂದ ಬೆಳೆಗಳಿಗೆ ಸಮತೋಲನವಾದ ಪೋಷಕಾಂಶಗಳು ಸಿಗುತ್ತವೆ. ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ದುರ್ಬಲವಾಗುವ ಸಾಧ್ಯತೆಗಳಿವೆ. ಆದ್ದರಿಂದ ಹೆಚ್ಚಾಗಿ ಅಲ್ಪಾವಧಿ ಬೆಳೆಗಳಾದ ಸೋಯಾಬಿನ್, ಅವರೆ, ದ್ವಿದಳ ಧಾನ್ಯಗಳನ್ನು ಬೆಳೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಖಿಯರಾದ ರೇಖಾ, ಲಕ್ಷ್ಮೀದೇವಿ, ಸುಧಾ, ಫಾಜೀಯಾ ಬಾನು, ರೈತರಾದ ಧನಂಜಯ, ಯೋಗೇಂದ್ರಪ್ಪ, ನಾಗರಾಜಪ್ಪ, ಗ್ರಾ.ಪಂ.ಗಳ ಪಿಡಿಒಗಳು ಹಾಜರಿದ್ದರು.
-25ಕೆಸಿಎನ್ಜಿ1: ಕಾರ್ಯಕ್ರಮದಲ್ಲಿ ನ್ಯಾನೊ ಗೊಬ್ಬರದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.