ಧಾರವಾಡ ಕೃಷಿ ಮೇಳಕ್ಕೆ ತೆರೆ

KannadaprabhaNewsNetwork |  
Published : Sep 25, 2024, 01:01 AM IST
24ಡಿಡಬ್ಲೂಡಿ9,10ಧಾರವಾಡದ ಕೃಷಿ ಮೇಳ ಮಂಗಳವಾರ ಮುಕ್ತಾಯವಾಗಿದ್ದು ಲಕ್ಷಾಂತರ ಜನರು ಮೇಳದಲಾಭ ಪಡೆದರು. | Kannada Prabha

ಸಾರಾಂಶ

500ಕ್ಕೂ ಹೆಚ್ಚು ಮಳಿಗೆಳಲ್ಲಿ ಕೃಷಿ ವಸ್ತು ಪ್ರದರ್ಶನ, ಬಾರಿ ಯಂತ್ರೋಪಕರಣಗಳ ಪ್ರದರ್ಶನ, ಆಹಾರ ಮಳಿಗೆ ಸೇರಿದಂತೆ ವಾಣಿಜ್ಯ ಮಳಿಗೆಗಳು ಮೇಳದಲ್ಲಿ ಗಮನ ಸೆಳೆದವು.

ಧಾರವಾಡ:

ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಘೋಷವಾಕ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ನಡೆದ ರೈತರ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಕೃಷಿ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ.

ವರ್ಷದಿಂದ ವರ್ಷಕ್ಕೆ ಜನಾಕರ್ಷಣೆಗೆ ಒಳಗಾಗುತ್ತಿರುವ ಕೃಷಿ ಮೇಳಕ್ಕೆ ಈ ಬಾರಿಯೂ ನಿರೀಕ್ಷಿತ ಸಂಖ್ಯೆಗೂ ಹೆಚ್ಚಿನ ಜನರು ಆಗಮಿಸಿದ್ದು ವಿಶೇಷ. ಮೊದಲ ಬಾರಿಗೆ ಕ್ಯೂಆರ್ ಕೋಡ್‌ ಮೂಲಕ ನೋಂದಣಿ ಮಾಡಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಿತ್ಯ ಲಕ್ಷಗಟ್ಟಲೇ ರೈತರು, ಕೃಷಿ ತಜ್ಞರು ಹಾಗೂ ಆಸಕ್ತರು ಆಗಮಿಸಿ ಮೇಳವನ್ನು ಒಂದರ್ಥದಲ್ಲಿ ಯಶಸ್ವಿಗೊಳಿಸಿದ್ದಾರೆ. ಕೆಲ ಸಣ್ಣ ಪುಟ್ಟ ಲೋಪದೋಷ ಹೊರತುಪಡಿಸಿ ಮೇಳವು ಸುಸೂತ್ರವಾಗಿ ಮುಕ್ತಾಯವಾಗಿದೆ. ಎರಡು ದಿನ ಮಧ್ಯಾಹ್ನದ ನಂತರ ಸುರಿದ ಮಳೆ ಮೇಳಕ್ಕೆ ಅಡ್ಡಿ ಉಂಟು ಮಾಡಿದರೂ ಜನರ ಉತ್ಸಾಹಕ್ಕೆ ಮಾತ್ರ ಯಾವುದೇ ತೊಂದರೆ ಆಗಲಿಲ್ಲ.

ಮೇಳದಲ್ಲೇನಿತ್ತು:

500ಕ್ಕೂ ಹೆಚ್ಚು ಮಳಿಗೆಳಲ್ಲಿ ಕೃಷಿ ವಸ್ತು ಪ್ರದರ್ಶನ, ಬಾರಿ ಯಂತ್ರೋಪಕರಣಗಳ ಪ್ರದರ್ಶನ, ಆಹಾರ ಮಳಿಗೆ ಸೇರಿದಂತೆ ವಾಣಿಜ್ಯ ಮಳಿಗೆಗಳು ಮೇಳದಲ್ಲಿ ಗಮನ ಸೆಳೆದವು. ಕೃಷಿ ತಾಂತ್ರಿಕತೆಗಳು, ಸಮಗ್ರ ಕೃಷಿ, ಹೈನುಗಾರಿಕೆ, ರೇಷ್ಮೆ ಬೆಳೆ, ತೋಟಗಾರಿಕೆ ಹೀಗೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಾರ್ಗದರ್ಶನ ಹಾಗೂ ಹೊಸ ಹೊಸ ತಳಿಗಳ ಪರಿಚಯ, ಹೊಸ ತಾಂತ್ರಿಕತೆಗಳನ್ನು ಮೇಳದಲ್ಲಿ ರೈತರಿಗೆ ಪರಿಚಯಿಸಲಾಯಿತು. ಹಿಂಗಾರು ಹಂಗಾಮು ಸಮೀಪಿಸಿದ ಕಾರಣ ಬಿತ್ತನೆ ಬೀಜ ಮಾರಾಟ ಸಹ ರೈತರಿಗೆ ತುಂಬ ಅನುಕೂಲವಾಯಿತು.

ನಾಲ್ಕು ದಿನಗಳ ಮಾಹಿತಿ:

ಮೊದಲ ದಿನ ಶನಿವಾರ ಬೀಜ ಮೇಳ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರವು ಹತ್ತು ವರ್ಷಗಳಲ್ಲಿ ರೈತರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಮಾಡಿದ ಕಾರ್ಯಕ್ರಮಗಳನ್ನು ತಿಳಿಸಿದರು. ಇದೇ ವೇದಿಕೆಯಲ್ಲಿ ಬೀಜೋತ್ಪಾದನೆ ಮಾಡಿದ ರೈತರನ್ನು ಗೌರವಿಸಲಾಯಿತು. ಇದಕ್ಕೂ ಮುಂಚೆ ಫಲಪುಷ್ಪ ಪ್ರದರ್ಶನ, ಕೀಟ ಪ್ರಪಂಚವನ್ನು ಜೋಶಿ ಉದ್ಘಾಟಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಕುಲಸಚಿವರ ಹೆಸರು ಪ್ರಕಟಿಸಿಲ್ಲ ಹಾಗೂ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂಬ ಆರೋಪದಿಂದ ಮೇಳಕ್ಕೆ ಶುರುವಾದ ಆರೋಪಗಳು ಮೇಳದ 2ನೇ ದಿನ ಉದ್ಘಾಟನೆ ವೇಳೆ ಗಣ್ಯರ ಭಾಷಣದಲ್ಲಿ ಸ್ಫೋಟಗೊಂಡಿತು. ಶಾಸಕರಾದ ಎನ್‌.ಎಚ್‌. ಕೋನರಡ್ಡಿ ಹಾಗೂ ಅಬ್ಬಯ್ಯ ಪ್ರಸಾದ ನೇರವಾಗಿ ಕುಲಪತಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು, ಉಸ್ತುವಾರಿ ಸಚಿವರಂತೂ ಕುಲಪತಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಇದೇ ವೇದಿಕೆಯಲ್ಲಿ ಕೃಷಿ ವಿವಿ ವ್ಯಾಪ್ತಿಯ ಜಿಲ್ಲೆಗಳ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇನ್ನು, ಮೇಳದ 3 ಹಾಗೂ 4ನೇ ದಿನ ಮುಖ್ಯ ವೇದಿಕೆ ಹಾಗೂ ಸಮಾನಾಂತರ ವೇದಿಕೆಯಲ್ಲಿ ಕೃಷಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚೆ, ಸಂವಾದಗಳು ನಡೆದವು. ರೈತರಿಂದ ರೈತರಿಗೆ ಕಾರ್ಯಕ್ರಮಗಳು ನಡೆದವು.

ಮಂಗಳವಾರ ನಡೆದ ಕೃಷಿ ಮೇಳದ ಸಮಾರೋಪದಲ್ಲಿ ವಿಶ್ರಾಂತ ಕುಲಪತಿ ಡಾ. ಜೆ.ಎಚ್. ಕುಲಕರ್ಣಿ, ಕೃಷಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಮರುಬಳಕೆ ಮಾಡಬೇಕು. ಹವಾಮಾನದ ವೈಪರೀತ್ಯಗಳನ್ನು ನಿರ್ವಹಿಸಲು ಕೃಷಿಯಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು. “ಕೃಷಿ ಇಂಜಿನಿಯರಿಂಗ್ ಸುಧಾರಿತ ಬೇಸಾಯ ಕ್ರಮಗಳು” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಕೃವಿವಿಯ ಕುಲಪತಿ ಡಾ. ಪಿ.ಎಲ್. ಪಾಟೀಲ, ಕೃಷಿ ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸಿದ್ದಾಗಿ ಹೇಳಿದರು. ಇದೇ ವೇಳೆ “ಪೈರಿಗೆ ನೀರು ಬೇಕೆಂಬಲ್ಲಿ” ಎಂಬ ಲೇಖನಕ್ಕೆ ಚನ್ನವೀರ ಕಣವಿ ಉತ್ತಮ ಕೃಷಿ ಲೇಖನ ಪ್ರಶಸ್ತಿಯನ್ನು ಕೃಷಿ ಇಲಾಖೆ ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಅವರಿಗೆ ಪ್ರದಾನ ಮಾಡಲಾಯಿತು.

ಕೃಷಿ ಮೇಳದ 4ನೇ ದಿನ 4.70 ಲಕ್ಷ ರೈತರು ಸೇರಿದಂತೆ ಒಟ್ಟಾರೆ ನಾಲ್ಕು ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ