ಧಾರವಾಡ: ಕಳೆದ 11 ವರ್ಷಗಳ ಆನಂತರ ಇದೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಅನಿರೀಕ್ಷಿತ ಆಲಿಕಲ್ಲು ಮಳೆಯಾಗಿದ್ದು, ಇದರಿಂದ ಕಲಘಟಗಿ, ಹುಬ್ಬಳ್ಳಿ, ನವಲಗುಂದ ತಾಲೂಕಿನಲ್ಲಿ ಜಾನುವಾರು, ಮನೆ ಮತ್ತು ಬೆಳೆ ಹಾನಿ ಆಗಿದೆ. ಸಂಬಂಧಿಸಿದ ತಾಲೂಕುಗಳ ಅಧಿಕಾರಿಗಳು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ಬೆಳೆ ಹಾನಿ ಹಾಗೂ ಮನೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ರೈತರಿಂದ ಅಥವಾ ಫಲಾನುಭವಿಗಳಿಂದ ಯಾವುದೇ ರೀತಿಯಲ್ಲಿ ದೂರು ಬರದಂತೆ ಎಚ್ಚರಿಕೆಯಿಂದ, ಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಲಘಟಗಿಯಲ್ಲಿ ಅಂದಾಜು 205 ಎಕರೆ ಮಾವು ಸೇರಿದಂತೆ ಸುಮಾರು 450 ಎಕರೆ ಪ್ರದೇಶದಲ್ಲಿ ಮಾವು, ಬಾಳೆ, ತರಕಾರಿ ಬೆಳೆಗಳಿಗೆ ಹಾನಿ ಆಗಿದೆ ಎಂದು ಕಲಘಟಗಿ ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಜಂಟಿ ಸಮೀಕ್ಷೆ ಮಾಡಿ, ನಿಖರವಾದ ವರದಿ ಸಲ್ಲಿಸಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿರುವ ರೈತರಿಗೆ ಪರಿಹಾರ ದೊರಕುವಂತೆ ಮಾಡಲು ವಿಮಾ ಕಂಪನಿ ಪ್ರತಿನಿಧಿಗಳಿಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.ಮಾ. 21ರಂದು ಸಹ ಜಿಲ್ಲೆಯಲ್ಲಿ ಮಳೆ, ಗುಡುಗು, ಸಿಡಿಲು, ಮಿಂಚು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲ ಹಂತದ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಎಂದ ಅವರು, ಜಿಲ್ಲಾ ಮಟ್ಟ, ತಾಲೂಕು ಮಟ್ಟ ಹಾಗೂ ಹೋಬಳಿ ಮತ್ತು ಗ್ರಾಮ ಮಟ್ಟದ ಎಲ್ಲ ಹಂತದ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿ, ಸಿಬ್ಬಂದಿ ತಮ್ಮ ಮೊಬೈಲ್ ಬಂದ್ ಇಡಬಾರದು. ವಿಶೇಷವಾಗಿ ರಾತ್ರಿ ವೇಳೆ ಸ್ವಿಚ್ ಆಫ್ ಮಾಡಬಾರದು. ಅಕಾಲಿಕ ಮಳೆ ಅಥವಾ ಇತರ ತೊಂದರೆಗಳಿಗಾಗಿ ಸಾರ್ವಜನಿಕರು ತುರ್ತಾಗಿ ಸಂಪರ್ಕಿಸುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಅತಿಯಾದ ಮಳೆ, ಗುಡುಗು, ಸಿಡಿಲಿನ ಸಮಯದಲ್ಲಿ ಜನರು ಹೊರಗಡೆ ನಿಲ್ಲದೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಮರಗಳ ಕೆಳಗೆ ನಿಲ್ಲುವುದು, ತೆರೆದ ಮೈದಾನಗಳಲ್ಲಿ ಇರುವುದನ್ನು ತಪ್ಪಿಸಬೇಕು. ವಿದ್ಯುತ್ ಕಂಬಗಳು, ಲೋಹದ ವಸ್ತುಗಳು ಮತ್ತು ನೀರಿನ ಪ್ರದೇಶಗಳಿಂದ ದೂರವಿರುವುದು ಸುರಕ್ಷಿತ ಕ್ರಮವಾಗಿದೆ. ಮನೆಗಳಲ್ಲಿ ಇದ್ದಾಗ ವಿದ್ಯುತ್ ಉಪಕರಣಗಳನ್ನು ಬಳಸದಿರುವುದು, ಮೊಬೈಲ್ ಚಾರ್ಜ್ ಮಾಡುವುದನ್ನು ತಪ್ಪಿಸುವುದು ಮತ್ತು ಕಿಟಕಿಗಳು, ಬಾಗಿಲುಗಳಿಂದ ದೂರವಿರುವುದು ಒಳಿತು. ರೈತರು ತಮ್ಮ ಪಶುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಉಪವಿಭಾಗಾಧಿಕಾರಿ ಶಾಲಾಂ ಹುಸೇನ್, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಡಾ. ಎಸ್.ವಿ. ಸಂತಿ, ಜಗದೀಶ ಪಾಟೀಲ, ಡಾ. ಎಸ್.ಎಂ. ಹೊನಕೇರಿ ಹಾಗೂ ತಹಸೀಲ್ದಾರರು ಇದ್ದರು.