ಧಾರವಾಡ ಜಿಲ್ಲೆಗೆ ಬೇಕಿದೆ ಅಭಿವೃದ್ಧಿ ಭಾಗ್ಯ!

KannadaprabhaNewsNetwork |  
Published : Dec 12, 2025, 02:15 AM IST
4455 | Kannada Prabha

ಸಾರಾಂಶ

ಜಿಲ್ಲೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಅನುದಾನ ಸೇರಿದಂತೆ ಹೊಸ ಯೋಜನೆಗಳನ್ನು ಜಿಲ್ಲೆಗೆ ತರಲು ಸ್ಥಳೀಯ ಜನಪ್ರತಿನಿಧಿಗಳು ಹೇಳಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.

ಬಸವರಾಜ ಹಿರೇಮಠ

ಧಾರವಾಡ:

ಶಿಕ್ಷಣ, ಸಂಗೀತ, ಕಲೆ ಮತ್ತು ಸಾಹಿತ್ಯದ ಕೇಂದ್ರವೆಂದು ಧಾರವಾಡ ಜಿಲ್ಲೆಯು ಎಲ್ಲೆಡೆ ಮೆಚ್ಚುಗೆ ಪಡೆದರೂ ರಾಜ್ಯದ 2ನೇ ಹಂತದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ, ಅಭಿವೃದ್ಧಿ ಮತ್ತು ಮೂಲಸೌಕರ್ಯ ಸೌಲಭ್ಯದ ವಿಷಯದಲ್ಲಿ ತೀರಾ ಹಿಂದಿದೆ.

ಧಾರವಾಡದಲ್ಲಿ ಹೈಕೋರ್ಟ್ ಪೀಠ, ಟಾಟಾ ಮೋಟಾರ್ಸ್, ಟಾಟಾ ಮಾರ್ಕೊಪೊಲೊ, ಐಐಟಿ, ಐಐಐಟಿ, ಭಾರತೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಿವೆ. ಹುಬ್ಬಳ್ಳಿಯಲ್ಲಿ ಕೆಎಂಸಿ-ಆರ್‌ಸಿ, ವಿಮಾನ ನಿಲ್ದಾಣ ಮತ್ತು ನೈಋತ್ಯ ರೈಲ್ವೆಯ ಪ್ರಧಾನ ಕಚೇರಿ, ವಾಯವ್ಯ ಸಾರಿಗೆಯ ಕೇಂದ್ರ ಕಚೇರಿ ಇದೆ. ಆದಾಗ್ಯೂ, ಹು-ಧಾ ಅವಳಿ ನಗರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಜಿಲ್ಲೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಅನುದಾನ ಸೇರಿದಂತೆ ಹೊಸ ಯೋಜನೆಗಳನ್ನು ಜಿಲ್ಲೆಗೆ ತರಲು ಸ್ಥಳೀಯ ಜನಪ್ರತಿನಿಧಿಗಳು ಹೇಳಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಧಾರವಾಡ ಜಿಲ್ಲೆಯು ಉಳಿದ 2ನೇ ಹಂತದ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದಿದೆ ಎನ್ನುತ್ತಾರೆ ಧಾರವಾಡ ನಾಗರಿಕರು.

ಏನೇನು ಸಮಸ್ಯೆಗಳು?

ಧಾರವಾಡ-ಕಲಘಟಗಿ ರಸ್ತೆ ಮತ್ತು ಧಾರವಾಡ-ಹಳಿಯಾಳ ರಸ್ತೆಯಲ್ಲಿ ಸಂಚಾರ ದುಃಸ್ವಪ್ನವಾಗಿದೆ. ಬಹು ನಿರೀಕ್ಷೆ ಇಟ್ಟು ಶುರು ಮಾಡಿದ ಬಿಆರ್‌ಟಿಎಸ್‌ ಸಮಸ್ಯೆ ತಂದೊಡ್ಡಿದ್ದು, ಇಆರ್‌ಟಿ ಎಂಬ ಹೊಸ ಯೋಜನೆ ಮಾತು ಕೇಳಿ ಬರುತ್ತಿವೆ. ಅವಳಿ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ ಮತ್ತು ಪಾಲಿಕೆ ವ್ಯಾಪ್ತಿಯ ಸುಮಾರು 140 ಉದ್ಯಾನವನಗಳು ನಿರ್ವಹಣೆಯ ಕೊರತೆಯಿಂದಾಗಿ ಸೊರಗುತ್ತಿವೆ. ಕೆಲಗೇರಿ, ಸಾಧನಕೇರಿ ಸೇರಿದಂತೆ ಹಲವು ಕೆರೆಗಳು ಕೊಳಚೆ ನೀರು ಸಂಗ್ರಹ ತಾಣವಾಗಿವೆ. ಹಲವು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣವಾಗಿಲ್ಲ. 24 ಗಂಟೆ ಕುಡಿಯುವ ನೀರಿನ ಯೋಜನೆಯೂ ಅಷ್ಟಕ್ಕಷ್ಟೆ. ಕವಿವಿ ಅನುದಾನ ಕೊರತೆ ಅನುಭವಿಸುತ್ತಿದ್ದು, ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ರಿಂಗ್‌ ರಸ್ತೆ ಸೇರಿದಂತೆ ಪ್ರಮುಖ ಯೋಜನೆಗಳು ದಾಖಲೆಯಲ್ಲಿ ಉಳಿದಿವೆ.

ಅಧಿವೇಶನದಲ್ಲಿ ಪ್ರಶ್ನೆ:

ಧಾರವಾಡದ ಗಂಗೂಬಾಯಿ ಹಾನಗಲ್‌ ಮನೆ ಹಾಳು ಬಿದ್ದಿದೆ. ಕಲಾ ಭವನ ಪಾಳು ಬಿದ್ದಿದೆ. ಕಳೆದ ಹತ್ತು ವರ್ಷಗಳಿಂದ ಈಜುಗೊಳ ಹಾಗೂ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ನಡೆಯುತ್ತಲೇ ಇದೆ. ಅವಳಿ ನಗರದಲ್ಲಿ ವಿಪರೀತ ಟ್ರಾಫಿಕ್‌ ಸಮಸ್ಯೆ. ಹೀಗೆ ಹತ್ತಾರು ಸಮಸ್ಯೆಗಳಿವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಪ್ರಶ್ನಿಸುತ್ತಾರೆಂಬ ನಿರೀಕ್ಷೆ ಇದೆ ಎಂದು ಹಿರಿಯ ನಾಗರಿಕ ಪ್ರಹ್ಲಾದ್ ನರಸಾಪುರ ಹೇಳಿದರು.

ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಜಿಲ್ಲೆಯು ತಾರತಮ್ಯ ಅನುಭವಿಸಲು ಪ್ರಮುಖ ಕಾರಣ. ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ನಾಲ್ವರು ಮತ್ತು ಬಿಜೆಪಿಯ ಮೂವರು ಶಾಸಕರಿದ್ದಾರೆ. ಧಾರವಾಡ (ಗ್ರಾಮೀಣ) ಶಾಸಕ ವಿನಯ ಕುಲಕರ್ಣಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ನವಲಗುಂದ ಶಾಸಕ ಎನ್.ಎಚ್. ​​ಕೋನರಡ್ಡಿ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ತಮ್ಮ ಕ್ಷೇತ್ರಗಳನ್ನು ಮೀರಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಲಘಟಗಿಯನ್ನು ಪ್ರತಿನಿಧಿಸುವ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆಗೊಮ್ಮೆ-ಈಗೊಮ್ಮೆ ಸಭೆ ನಡೆಸುವುದರಲ್ಲಿಯೇ ತೃಪ್ತರಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಸರ್ಕಾರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪ್ರಬಲ ಕಾಂಗ್ರೆಸ್‌ ನಾಯಕನ ಕೊರತೆ ಇರುವುದು ಜಿಲ್ಲೆಯ ಪಾಲಿಗೆ ದುರದೃಷ್ಟಕರ ಎಂದು ಕಾಂಗ್ರೆಸ್‌ನ ಮಾಜಿ ಶಾಸಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ