ಧಾರವಾಡ ಮಾವು ಮೇಳ ಆರಂಭ

KannadaprabhaNewsNetwork | Published : May 2, 2024 12:17 AM

ಸಾರಾಂಶ

ಮೇಳದ ಮೊದಲ ದಿನದಂದು ಹಣ್ಣನ್ನು ಖರೀದಿಸಲು ಸಾಕಷ್ಟು ಗ್ರಾಹಕರು ಮುಗಿಬಿದ್ದಿದ್ದರು. ಮೇಳದಲ್ಲಿ ಬರೀ ಆಪೂಸ್‌ ಮಾತ್ರವಲ್ಲದೇ ಕೇಸರ್‌, ಕಲಮಿ ಅಂತಹ ಹತ್ತಾರು ತಳಿಗಳಿವೆ. ಎರಡೂವರೆ ಕೆಜಿ ಒಂದು ಬಾಕ್ಸ್‌ಗೆ (ಅಂದಾಜು 11 ಹಣ್ಣುಗಳು) ₹ 500ರ ವರೆಗೆ ಮಾರಾಟ ಮಾಡಲಾಗುತ್ತಿದೆ.

ಧಾರವಾಡ:

ಗುಣಮಟ್ಟದ ಮತ್ತು ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಧಾರವಾಡ ಮಾವು ಎಂದು ಪ್ರತ್ಯೇಕ ಬ್ರ್ಯಾಂಡ್‌ ಮಾಡಿಕೊಂಡ ಬೆಳೆಗಾರರು ಇಲ್ಲಿಯ ಗಾಂಧಿ ಶಾಂತಿ ಪ್ರತಿಷ್ಠಾನದ ಅವರಣದಲ್ಲಿ ಮೇ 1ರಿಂದ ಒಂದು ತಿಂಗಳು ಕಾಲ ಮಾವು ಮೇಳ ಶುರು ಮಾಡಿದ್ದಾರೆ.

ಸಮೀಪದ ಕೆಲಗೇರಿ, ನವಲೂರು, ಜೋಗೆಲ್ಲಾಪೂರ, ತೇಗೂರು, ಅಂಬ್ಲಿಕೊಪ್ಪ, ಹಳ್ಳಿಗೇರಿ, ಮನಸೂರು, ಮುಗದ, ಮಂಡಿಹಾಳ, ದೇವಗಿರಿ, ಕ್ಯಾರಕೊಪ್ಪ ಸೇರಿದಂತೆ ಮಾವು ಬೆಳೆಯುವ ಸುತ್ತಲಿನ ರೈತರು ಒಗ್ಗೂಡಿ ಈ ಮೇಳ ಆರಂಭಿಸಿದ್ದಾರೆ. ಬೆಳೆಗಾರರು ಸಹ ವೈಜ್ಞಾನಿಕ ಬೆಲೆ ಪಡೆಯುತ್ತಾರೆ, ಗ್ರಾಹಕರು ಸಹ ಗುಣಮಟ್ಟದ ಮಾವು ತಿನ್ನಲಿ ಎಂಬುದೇ ಮೇಳದ ಉದ್ದೇಶವಾಗಿದೆ. ವಿಶೇಷ ಅಂದರೆ, ಬೆಳೆಗಾರರ ಜತೆಗೆ ತೋಟಗಾರಿಕೆ ತಜ್ಞರು ಇದರಲ್ಲಿ ಭಾಗಿಯಾಗಿದ್ದಾರೆ.

ಮೇಳದ ಮೊದಲ ದಿನದಂದು ಹಣ್ಣನ್ನು ಖರೀದಿಸಲು ಸಾಕಷ್ಟು ಗ್ರಾಹಕರು ಮುಗಿಬಿದ್ದಿದ್ದರು. ಮೇಳದಲ್ಲಿ ಬರೀ ಆಪೂಸ್‌ ಮಾತ್ರವಲ್ಲದೇ ಕೇಸರ್‌, ಕಲಮಿ ಅಂತಹ ಹತ್ತಾರು ತಳಿಗಳಿವೆ. ಎರಡೂವರೆ ಕೆಜಿ ಒಂದು ಬಾಕ್ಸ್‌ಗೆ (ಅಂದಾಜು 11 ಹಣ್ಣುಗಳು) ₹ 500ರ ವರೆಗೆ ಮಾರಾಟ ಮಾಡಲಾಗುತ್ತಿದೆ. ಮಾವು ಬೆಳೆಗಾರರ ಸಂಘಟನೆ, ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ, ಬೆಳೆಗಾರರಿಂದ ಬಳಕೆದಾರರಿಗ ನೇರ ಮಾರಾಟ ವ್ಯವಸ್ಥೆ ಕಲ್ಪಿಸುವುದು ಮೇಳದ ಮುಖ್ಯ ಉದ್ದೇಶ ಎನ್ನುತ್ತಾರೆ ಮಾವು ಬೆಳೆಗಾರ ಸುರೇಶ ಆಕಳವಾಡಿ.

ಮಾವು ಬೆಳೆಗಾರರು ವಾಣಿಜ್ಯೀಕರಣ ಹಾಗೂ ಹವಾಮಾನ ಬದಲಾವಣೆಯಿಂದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೇರೆ ರಾಜ್ಯಗಳ ಗುತ್ತಿಗೆದಾರರು ಮಾವಿನ ತೋಪು ಹೂ ಬಿಡಲು ಆರಂಭಿಸಿದ ಕೂಡಲೇ ಕಡಿಮೆ ಬೆಲೆಗೆ ಗುತ್ತಿಗೆ ಪಡೆಯುತ್ತಿದ್ದಾರೆ. ಮಾರುಕಟ್ಟೆ ವಿಶ್ಲೇಷಣೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ, ಬಡ ರೈತರು ತಮ್ಮ ತೋಪುಗಳನ್ನು ಕಡಿಮೆ ಬೆಲೆಗೆ ಗುತ್ತಿಗೆಗೆ ನೀಡುತ್ತಾರೆ. ಆದ್ದರಿಂದ, ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಪಡೆಯಲು ಮತ್ತು ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿದ ಹಣ್ಣು ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಮೇಳ ಪ್ರಮುಖ ಎನಿಸಿದೆ ಎಂದು ಸಂಘಟಕರಲ್ಲಿ ಒಬ್ಬರಾದ ಡಾ. ರಾಜೇಂದ್ರ ಪೋದ್ದಾರ ಹೇಳಿದರು.

Share this article