ಹೊಸಪೇಟೆ: ಹಾಸನ ಸಂಸದ ಪ್ರಜ್ವಲ ರೇವಣ್ಣ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಲಿ, ತನಿಖೆಯಿಂದ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದು ಮಾಜಿ ಸಚಿವ ಭೈರತಿ ಬಸವರಾಜ್ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರವೇ ಕ್ರಮ ಕೈಗೊಳ್ಳಬೇಕು. ಇದರ ಬದಲಿಗೆ ನಮ್ಮನ್ನು ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಲಿ ಎಂದರು.ಪ್ರಜ್ವಲ ರೇವಣ್ಣ ಪ್ರಕರಣದ ಕುರಿತು ಇನ್ನು ತನಿಖೆಯೇ ಆಗಿಲ್ಲ. ತನಿಖೆ ನಡೆಯಲಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೂ ನ್ಯಾಯ ದೊರೆಯಬೇಕಿದೆ. ಬಿಜೆಪಿ ಕೂಡ ತನಿಖೆ ಆಗಲಿ, ಕಾನೂನು ಕ್ರಮ ಕೈಗೊಳ್ಳಲಿ ಎಂದೇ ಒತ್ತಾಯಿಸುತ್ತದೆ. ಈಗಾಗಲೇ ಜೆಡಿಎಸ್ ಪ್ರಜ್ವಲರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ. ಈ ಹಂತದಲ್ಲಿ ಬಿಜೆಪಿ ಮೈತ್ರಿ ಕಡಿದುಕೊಳ್ಳಲು ಬರುವುದಿಲ್ಲ. ಈಗಾಗಲೇ ರಾಜ್ಯದಲ್ಲಿ 14 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇನ್ನು 14 ಸ್ಥಾನಗಳಿಗೆ ಮೇ 7ರಂದು ಚುನಾವಣೆ ನಡೆಯಲಿದೆ ಎಂದರು.
ಈಗ ಮೈತ್ರಿ ಮುರಿದುಕೊಳ್ಳುವ ಮಾತೇ ಬರುವುದಿಲ್ಲ. ನಾವು ಕೂಡ ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗಲಿ ಎಂದೇ ಹೇಳುತ್ತಿದ್ದೇವೆ. ನೇಹಾ ಹಿರೇಮಠ ಪ್ರಕರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ್ದಕ್ಕೂ ಈ ಪ್ರಕರಣಕ್ಕೂ ಹೋಲಿಕೆ ಸರಿಯಲ್ಲ. ನಾವು ಇಂತಹ ಪ್ರಕರಣವನ್ನು ಒಪ್ಪುವುದಿಲ್ಲ. ಹಾಗಾಗಿ ತನಿಖೆ ಆಗಲಿ ಎಂದು ಒತ್ತಾಯಿಸುತ್ತಿದ್ದೇವಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಈಗ ಎಳೆದು ತಂದಿದ್ದಾರೆ. ಉತ್ತರ ಕರ್ನಾಟಕದ ಮೇಲೆ ಇದರ ಪರಿಣಾಮ ಬೀರುವುದಿಲ್ಲ. ಹೀಗಿದ್ದರೂ ಸುಖಾಸುಮ್ಮನೆ ರಾಜಕಾರಣಕ್ಕೆ ಎಳೆದು ತರುತ್ತಿದೆ ಎಂದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಬಳ್ಳಾರಿಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ತುಂಗಭದ್ರಾ ಜಲಾಶಯಕ್ಕೆ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಬಸವರಾಜ ಬೊಮ್ಮಾಯಿ ಸರ್ಕಾರ ₹1000 ಕೋಟಿ ಅನುದಾನ ಇಟ್ಟಿತ್ತು. ಈ ಸರ್ಕಾರ ಈ ಬಗ್ಗೆ ಗಪ್‌ಚುಪ್ ಆಗಿದೆ. ಮೊದಲು ಸಮನಾಂತರ ಜಲಾಶಯ ನಿರ್ಮಾಣ ಮಾಡಲಿ. ರೈತರಿಗೆ ಸರ್ಕಾರ ಅನುಕೂಲ ಮಾಡಲಿ. ಬಳ್ಳಾರಿ ವಿಮಾನ ನಿಲ್ದಾಣದ ವಿಷಯದಲ್ಲೂ ರಾಜ್ಯ ಸರ್ಕಾರ ಮೌನಕ್ಕೆ ಜಾರಿದೆ ಎಂದು ದೂರಿದರು.ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ಬಳ್ಳಾರಿ ಕಡೆಗೆ ತಿರುಗಿಯೂ ನೋಡಲಿಲ್ಲ. ಸೋನಿಯಾ ಪ್ಯಾಕೇಜ್ ಎಂದು ಏನೂ ಮಾಡಲಿಲ್ಲ. ಸೋನಿಯಾ ಗಾಂಧಿ ಅವರು ಗೆದ್ರೂ ಬಳ್ಳಾರಿ ಕಡೆಗೆ ಬರಲಿಲ್ಲ. ಬಂದ್ರು, ಗೆದ್ರು, ಹೋದ್ರು. ಆದರೆ ಸುಷ್ಮಾ ಸ್ವರಾಜ್ ಸೋತರೂ ಬಳ್ಳಾರಿ ಜತೆ ನಂಟು ಹೊಂದಿದ್ದರು. ಹಾಗಾಗಿ ಜನ ಬಿಜೆಪಿಯತ್ತ ವಾಲಿದರು. ಇಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬರುತ್ತಿದೆ. ಈ ಬಾರಿಯೂ ಗೆಲ್ಲಲಿದೆ ಎಂದರು.
ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಸಿದ್ಧಾರ್ಥ ಸಿಂಗ್, ಅಯ್ಯಾಳಿ ತಿಮ್ಮಪ್ಪ, ಪ್ರಿಯಾಂಕಾ ಜೈನ್, ಶೇಖರ್, ಸಾಲಿಸಿದ್ದಯ್ಯಸ್ವಾಮಿ, ಶಂಕರ ಮೇಟಿ ಇದ್ದರು.