ಧಾರವಾಡ:
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾನ್ಯತೆ ದೊರೆತರೆ, ಹೆಚ್ಚಿನ ಅನುದಾನ ಪಡೆದು ಹುಬ್ಬಳ್ಳಿಗೆ ಸಮನಾಗಿ ಅಭಿವೃದ್ಧಿಗೊಳಿಸಬಹುದು, ಅಧಿಕಾರ ವಿಕೇಂದ್ರೀಕರಣದಿಂದ ಧಾರವಾಡ ಜನತೆಯ ಕೆಲಸ-ಕಾರ್ಯಗಳು ಸರಳ, ಸಮಯ ಮಿತಿಯಲ್ಲಾಗುತ್ತವೆ ಎಂಬುದಾಗಿತ್ತು. ಆದರೀಗ ತದ್ವಿರುದ್ಧ ಬೆಳವಣಿಗೆ ಆಗುತ್ತಿದೆ. ಹು-ಧಾ ಮಹಾನಗರ ಪಾಲಿಕೆ ಒಟ್ಟಾಗಿದ್ದರೆ ಮಾತ್ರ ಹೆಚ್ಚಿನ ಅನುದಾನ ಬರಲಿದೆ. ಹೀಗಾಗಿ ಧಾರವಾಡ ನಗರವನ್ನು ಪ್ರತ್ಯೇಕಗೊಳಿಸುವುದು ಬೇಡ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಿಂದ ಬರುತ್ತಿದ್ದು, ಧಾರವಾಡ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಮೊದಲಿನಿಂದಲೂ ಅಡ್ಡಿ:ತಕ್ಕಮಟ್ಟಿಗೆ ಜನಸಂಖ್ಯೆ ಇಲ್ಲ, ತೆರಿಗೆ ಸಂಗ್ರಹ ಕಡಿಮೆ, ವ್ಯಾಪ್ತಿ ಪ್ರದೇಶ ಸೇರಿದಂತೆ ಮಾನದಂಡ ವಿಷಯವಾಗಿ ಪ್ರತ್ಯೇಕ ಪಾಲಿಕೆಗೆ ಅನೇಕ ಸುಳ್ಳಿನಿಂದ ಶುರುವಾದ ರಾಜಕೀಯ ಅಡ್ಡಗಾಲು, ತೀವ್ರ ಹೋರಾಟದ ಫಲವಾಗಿ 2024ರ ಜ. 22ರಂದು ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆಯು ಪ್ರತ್ಯೇಕ ಪಾಲಿಕೆಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ನಾವೇ ಪ್ರತ್ಯೇಕ ಪಾಲಿಕೆ ತಂದಿದ್ದು ಎನ್ನುವ ರೀತಿಯಲ್ಲಿ ಧಾರವಾಡದಲ್ಲಿ ಆಗ ಬ್ಯಾನರ್ ಹಾಕಿದ ಮುಖಂಡರುಗಳೇ ಇಂದು, ಅನುದಾನದ ವಿಷಯದ ಅಡಿ ಹು-ಧಾ ಮಹಾನಗರ ಪಾಲಿಕೆ ಒಡೆಯುವುದೇ ಬೇಡ ಎನ್ನುತ್ತಿರುವುದು ಹೋರಾಟಗಾರರಿಗೆ ಹಾಗೂ ಧಾರವಾಡ ಜನತೆಗೆ ನುಂಗಲಾರದ ತುತ್ತಾಗಿದೆ.
ಸಿಎಂಗೆ ಪತ್ರ:
ಪ್ರಜಾಪ್ರಭುತ್ವದಲ್ಲಿ ಜನರ ಒತ್ತಾಸೆಗೆ ಇಷ್ಟೊಂದು ಸುದೀರ್ಘ ವಿಳಂಬ ಏತಕ್ಕೆ? ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ. ಈ ಹಿಂದೆ ಹು-ಧಾ ಮಹಾನಗರ ಪಾಲಿಕೆಗೆ ಬಂದ ಅನುದಾನ ಧಾರವಾಡಕ್ಕೆ ಸರಿ ಪ್ರಮಾಣದಲ್ಲಿ ಹಂಚಿಕೆಯಾಗುತ್ತಿಲ್ಲ. ಇದರಿಂದಲೇ ಪ್ರತ್ಯೇಕ ಪಾಲಿಕೆ ಕೂಗು ಎದ್ದಿತ್ತು ಎಂಬುದು ಗೊತ್ತಿದ್ದರೂ ಈಗ ಒಗ್ಗಟ್ಟಾಗಿದ್ದರೆ ದೊಡ್ಡ ಮೊತ್ತದ ಅನುದಾನ ಬರಲಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಎಂದು ಧಾರವಾಡ ನಾಗರಿಕರ ಪ್ರಶ್ನೆ.
ಈ ಹಿಂದೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪಾಲಿಕೆಗೆ ಒಪ್ಪಿಗೆ ಸೂಚಿಸಿ ಸಹಿ ಹಾಕಿದ ಪಾಲಿಕೆ ಸದಸ್ಯರು, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹು-ಧಾ ಮಹಾನಗರ ಪಾಲಿಕೆಯೇ ಮುಂದುವರಿಯಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಧಾರವಾಡ ಜನತೆಗೆ ಮತ್ತಷ್ಟು ಆಘಾತ ತಂದಿವೆ. ಹೋರಾಟ ನಿಶ್ಚಿತ...