ಬಸವರಾಜ ಹಿರೇಮಠ
ವಿದ್ಯಾಕಾಶಿ ಖ್ಯಾತಿ ಪಡೆದಿರುವ ಧಾರವಾಡ ತನ್ನ ಶೈಕ್ಷಣಿಕ ಘನತೆಯನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶದ ಮೂಲಕ ಹೆಚ್ಚಿಸಲು ಭಗೀರಥ ಪ್ರಯತ್ನ ನಡೆಸುತ್ತಿದೆ. 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಪೈಕಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಒಂದಂಕಿ ಸ್ಥಾನ ಪಡೆಯಲು ತೀವ್ರ ಕಸರತ್ತು ನಡೆಸಲಾಗುತ್ತಿದೆ.
ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡವು ತುಸು ಪ್ರಾಮಾಣಿಕ ಪ್ರಯತ್ನದಿಂದ ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿದೆ. ಹತ್ತು ಹಲವು ಉಪಕ್ರಮಗಳ ಮೂಲಕ ಉತ್ತಮ ಫಲಿತಾಂಶ ಸಾಧನೆಗೆ ಎರಡು ವರ್ಷಗಳಿಂದ ಪ್ರಯತ್ನ ನಡೆದಿದ್ದು, ಈ ವರ್ಷ ಉತ್ತಮ ಫಲಿತಾಂಶ ನಿರೀಕ್ಷೆ ಮೊದಲಿಗಿಂತಲೂ ಜಾಸ್ತಿ ಇದೆ.ಮಾ. 18 ರಿಂದ ಶುರು:
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾ. 18ರಿಂದ ಶುರುವಾಗಲಿದ್ದು, ಈಗಿನಿಂದಲೇ ಪರೀಕ್ಷೆಗೆ ಬೇಕಾದ ಸಿದ್ಧತೆ ನಡೆಯುತ್ತಿವೆ. 2023-24ನೇ ಸಾಲಿನಲ್ಲಿ ಜಿಲ್ಲೆಯು 27543 ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 20615 ವಿದ್ಯಾರ್ಥಿಗಳು ಪಾಸಾಗಿ ಜಿಲ್ಲೆಯು 23ನೇ ಸ್ಥಾನದಲ್ಲಿತ್ತು. ಅಂತೆಯೇ 2024-25ನೇ ಸಾಲಿನಲ್ಲಿ 27048 ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 18145 ವಿದ್ಯಾರ್ಥಿಗಳು ಪಾಸಾಗಿದ್ದು ಧಾರವಾಡ ಜಿಲ್ಲೆಯು 18ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿತ್ತು. ಈ ವರ್ಷ ಪರೀಕ್ಷೆಗೆ ಜಿಲ್ಲೆಯ 447 ಶಾಲೆಗಳ 27,464 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ನ. 29ರ ವರೆಗೂ ನೋಂದಣಿಗೆ ಅವಕಾಶವಿದೆ.ಏನೇನು ಪ್ರಯತ್ನ?
ಎಸ್‌ಎಸ್‌ಎಲ್‌ಸಿ ಸುಧಾರಣೆಗೆ ಬರೀ ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಗುರಿಯಾಗಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಜಿಲ್ಲಾಡಳಿತವು ಕಳೆದ ಎರಡು ವರ್ಷಗಳಿಂದ ಪೂರ್ವ ಪ್ರಾಥಮಿಕದಿಂದ ಹಿಡಿದು ಪ್ರೌಢಶಾಲೆಯ ವರೆಗೂ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಎಸ್‌ಎಸ್‌ಎಲ್‌ಸಿ ಸೇರಿ ಪ್ರೌಢಶಾಲೆಯ ಕೆಲವು ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ ಎಂಬ ಆರೋಪಗಳಿದ್ದು, ಪ್ರತಿಯೊಂದು ಮಗು ಸರಿಯಾಗಿ ಓದಲು ಹಾಗೂ ಬರೆಯಲು ಕಲಿಯಬೇಕು ಎನ್ನುವ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ಕ್ರಮಕೈಗೊಂಡಿದೆ. ನಂತರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರಿಂದ ಮಾರ್ಗದರ್ಶನ ಅಂತಹ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಪ್ರಾಥಮಿಕ, ಪ್ರೌಢಶಾಲೆಯ ಮಗು ಎಸ್‌ಎಸ್‌ಎಲ್‌ಸಿ ಬರುವ ಹೊತ್ತಿಗೆ ಕನಿಷ್ಠ ಪಾಸಾಗುವಷ್ಟಾದರೂ ತಿಳಿವಳಿಕೆ ಹೊಂದಿರುತ್ತದೆ ಎಂಬುದು ಶಿಕ್ಷಣ ತಜ್ಞರ ನಿರೀಕ್ಷೆ.ಎಸ್‌ಎಸ್‌ಎಲ್‌ಸಿಗೆ ಏನು ಪ್ರಯತ್ನ:
ಸಾಮಾನ್ಯವಾಗಿ ಖಾಸಗಿ ಶಾಲಾ ಸಂಸ್ಥೆಗಳ ಮಕ್ಕಳು ಟ್ಯೂಶನ್ ಹಾಗೂ ವಿಶೇಷ ತರಗತಿಗಳ ಮೂಲಕ ಸಮರ್ಥವಾಗಿ ಪರೀಕ್ಷೆ ಎದುರಿಸುತ್ತಾರೆ. ಆದರೆ, ಸರ್ಕಾರಿ ಶಾಲಾ ಮಕ್ಕಳಿಗೆ ಈ ಅವಕಾಶ ಕಡಿಮೆ. ಆದ್ದರಿಂದ ಶಿಕ್ಷಣ ಇಲಾಖೆಯು ಇಂತಹ ಮಕ್ಕಳಿಗೆ ವಿಶೇಷ ಕಾಳಜಿ ವಹಿಸುತ್ತಿದೆ. ನಿತ್ಯ ಬೆಳಗ್ಗೆ 5ಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಗೂ ವೇಕಅಪ್ ಕಾಲ್ ಹೆಸರಿನಲ್ಲಿ ಫೋನ್ ಮಾಡಿ ಎಬ್ಬಿಸಿ ಓದಲು ಹಚ್ಚುವುದು, ಬೆಳಗ್ಗೆ 9.30ರಿಂದ 10 ಹಾಗೂ ಸಂಜೆ 4.30ರಿಂದ 5ರ ವರೆಗೆ ಹೆಚ್ಚುವರಿ ತರಗತಿ, ಪ್ರತಿ ಪಾಠದ ನಂತರ ಘಟಕ ಪರೀಕ್ಷೆ, ರೂಢಿ ಪರೀಕ್ಷೆಗಳನ್ನು ಆಯಾ ಶಾಲೆಗಳ ಮಖ್ಯೋಪಾಧ್ಯಾಯರ ಮೂಲಕ ಶಿಕ್ಷಕರು ತೆಗೆದುಕೊಳ್ಳುತ್ತಿದ್ದಾರೆ. ಈ ಬಾರಿ ಶಾಲೆಯ ಶಿಕ್ಷಕರನ್ನು ಹೆಚ್ಚಿನ ಅನ್ಯತಾ ಕಾರ್ಯಗಳಿಗೆ ಬಳಸಿಕೊಳ್ಳದೇ ಪೂರ್ತಿಯಾಗಿ ಶಾಲೆಯಲ್ಲಿದ್ದು ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಡಿಪಿಯು ಎಸ್.ಎಸ್. ಕೆಳದಿಮಠ ಮಾಹಿತಿ ನೀಡಿದರು.ಘಟಕ ಪರೀಕ್ಷೆ:
ಈಗಾಗಲೇ ಪ್ರತಿ ಪಾಠದ ನಂತರ ಘಟಕ ಪರೀಕ್ಷೆಗಳು ನಡೆಯುತ್ತಿದ್ದು, ಜನವರಿ 2ನೇ ವಾರದಿಂದ ವಾರ್ಷಿಕ ಪರೀಕ್ಷೆ ವರೆಗೂ ಒಟ್ಟು ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳು ಜರುಗಲಿವೆ. ಆದ್ದರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಕಲಿಕೆಯಲ್ಲಿ ತುಸು ಹಿಂದುಳಿದ 7000 ವಿದ್ಯಾರ್ಥಿಗಳಿರುವುದು ಗೊತ್ತಾಗಿದ್ದು, ಅವರಿಗೆ ವಿಶೇಷ ತರಗತಿ, ಪರಿಹಾರ ಬೋಧನಾ ತರಗತಿ, ಗುಂಪು ಅಧ್ಯಯನ, ರಸಪ್ರಶ್ನೆ ಮೂಲಕ ಸಮರ್ಥರನ್ನಾಗಿ ಮಾಡಲಾಗುತ್ತಿದೆ. ಪೋಷಕರ ಸಭೆ, ಎಸ್‌ಡಿಎಂಸಿ ಸದಸ್ಯರ ಸಹಕಾರ ಸಹ ಪಡೆಯಲಾಗುತ್ತಿದೆ. ನಿರಂತರವಾಗಿ ಎರಡು ವರ್ಷ ರಾಜ್ಯಮಟ್ಟದ ಫಲಿತಾಂಶಕ್ಕಿಂತ ಕಡಿಮೆ ಫಲಿತಾಂಶ ಪಡೆದ 199 ಶಾಲೆಗಳನ್ನು ವಾಚ್ ಲಿಸ್ಟ್ ಮಾಡಲಾಗಿದ್ದು ನೋಡಲ್ ಅಧಿಕಾರಿ ನೇಮಿಸಿ ಆ ಶಾಲಾ ಮಕ್ಕಳಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ.ಒಟ್ಟಾರೆ ಈ ಬಾರಿ ಜಿಲ್ಲಾಧಿಕಾರಿ ಹಾಗೂ ಉಪ ನಿರ್ದೇಶಕರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ಉಪ ಮುಖ್ಯ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ ಹೇಳಿದರು.