ರಾಜೇಂದ್ರ ನಾವಿ
ಸಮೀಪದ ಘಟಪ್ರಭ ತೀರದ ಢವಳೇಶ್ವರ ಗ್ರಾಮ ಪಂಚಾಯಿತಿ ೨೦೨೪-೨೫ನೇ ಸಾಲಿನ ರಬಕವಿ-ಬನಹಟ್ಟಿ ತಾಲೂಕು ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ನಿರಂತರ ಪ್ರವಾಹಕ್ಕೆ ತುತ್ತಾದರೂ ನಾಗರಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ, ಸರಕಾರದ ಯೋಜನೆಗಳ ಅನುಷ್ಠಾನ ಮತ್ತು ಅನುದಾನ ಸಮರ್ಪಕ ಬಳಕೆ ಮಾಡಿಕೊಳ್ಳುವ ಮೂಲಕ ಮಾದರಿಯಾಗಿದೆ. ತಾಲೂಕಿಗೊಂದರಂತೆ ರಾಜ್ಯದಲ್ಲಿ ೧೯೫ ಗ್ರಾಮ ಪಂಚಾಯತಿಗೆ ಪ್ರಶಸ್ತಿ ನೀಡಲಾಗುತ್ತದೆ. ಸುಸಜ್ಜಿತ ಸ್ವಂತ ಕಟ್ಟಡ ಹೊಂದಿರುವ ಢವಳೇಶ್ವರ ಗ್ರಾಮ ಪಂಚಾಯಿತಿ ಒಂದೇ ಗ್ರಾಮ ವ್ಯಾಪ್ತಿ ಹೊಂದಿದ್ದು, ೧೯ ಸದಸ್ಯರಿದ್ದಾರೆ. ಮುಂಚೆ ನಂದಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿತ್ತು. ಕೆಲ ವರ್ಷಗಳ ಹಿಂದೆ ಪ್ರತೇಕ ಪಂಚಾಯತಿಯಾಗಿದೆ. ೧೫ನೇ ಹಣಕಾಸು ಯೋಜನೆ, ನರೇಗಾ ಮತ್ತು ಸ್ಥಳೀಯ ಸಂಪನ್ಮೂಲಗಳು ಗ್ರಾಪಂ ಅನುದಾನದ ಮೂಲಗಳಾಗಿವೆ. ಪಾರದರ್ಶಕ ಆಡಳಿತ, ಡಿಜಿಟಲೀಕರಣ, ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ, ತೆರಿಗೆ ಸಂಗ್ರಹ ಸೇರಿದಂತೆ ಹಲವು ಅಭಿವೃದ್ಧಿ ಮತ್ತು ಆಡಳಿತದ ಕೆಲಸ ಕಾರ್ಯಗಳಲ್ಲಿ ಇತರ ಗ್ರಾಪಂಗಳಿಗೆ ಮಾದರಿಯಾಗಿದೆ.
ಸಿಸಿ ಕ್ಯಾಮೆರಾ ಅಳವಡಿಕೆ:ರೈತರ ಮೋಟಾರ್ ಪಂಪ್‌ಸೆಟ್, ದನಕರು ಮತ್ತು ವಾಹನ ಕಳ್ಳತನ ಹೆಚ್ಚಿದ್ದರಿಂದ ಗ್ರಾಮದ ಪ್ರಮುಖ ವೃತ್ತ ಮತ್ತು ಬೀದಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪಾಳು ಬಿದ್ದ ಸಮುದಾಯ ಭವನವನ್ನು ಅರಿವು ಕೇಂದ್ರವಾಗಿ ಅಭಿವದ್ಧಿಪಡಿಸಲಾಗಿದೆ.
ನಂದನವನದಂತೆ ಕಂಗೊಳಿಸುವ ರುದ್ರಭೂಮಿ:ಗ್ರಾಮದಲ್ಲಿ ಗಿಡಗಂಟಿ ಮತ್ತು ಕಸಕಡ್ಡಿಗಳಿಂದ ಆವೃತವಾಗಿದ್ದ ಹಿಂದೂ ರುದ್ರಭೂಮಿಯನ್ನು ನಂದನವನವನ್ನಾಗಿ ಕಂಗೊಳಿಸುವಂತೆ ಮಾಡಿದ್ದಾರೆ. ಅಲ್ಲದೇ ಸ್ಮಶಾನದ ಆವರಣದಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ದೇವಸ್ಥಾನದ ಕಳೆ ಮೂಡಿಸಲಾಗಿದೆ. ಪ್ರತಿ ವರ್ಷ ಈ ಸ್ಮಶಾನದಲ್ಲೇ ಶಿವರಾತ್ರಿ ಸತ್ಸಂಗ ನಡೆಸಲಾಗುತ್ತಿದೆ.
ಸ್ವಚ್ಛತೆ, ಪಾರದರ್ಶಕ ಆಡಳುಇತ ಸೇರಿದಂತೆ ಹಲವು ಅಭಿವೃದ್ದಿ ಕೆಲಸಗಳ ಮೂಲಕ ನಮ್ಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿದ್ದು, ಗ್ರಾಮಸ್ಥರ, ಆಡಳಿತ ಮಂಡಳಿಯ, ಸಿಬ್ಬಂದಿ ವರ್ಗದ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಮತ್ತಷ್ಟು ಪ್ರಗತಿ ಸಾಧಿಸುವ ಜವಾಬ್ದಾರಿ ಹೆಚ್ಚಾಗಿದೆ.