ಡಿಎಚ್‌ಓ ಟಿಎಚ್‌ಓಗಳು ಔಷಧಿ ಹಗರಣದಲ್ಲಿ ಭಾಗಿ

KannadaprabhaNewsNetwork | Published : May 6, 2025 12:18 AM

ಸಾರಾಂಶ

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ೮ ಹಾಸಿಗೆಗಳ ಐಸಿಯು ಘಟಕ ಹಾಗೂ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ ಜತೆಗೆ ಅರವಳಿಕೆ ವರ್ಕ್‌ಸ್ಟೇಷನ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಿ ಖರೀದಿಗಾಗಿ ೧೮ ಲಕ್ಷ ರು. ಬರುತ್ತದೆ, ತಾಲೂಕಿನಲ್ಲಿ ೩ ಕಿ.ಮೀ.ಗೆ ಒಂದು ಆಸ್ಪತ್ರೆ ಇದೆ, ಆದರೆ ಈ ೧೮ ಲಕ್ಷದ ಔಷಧಿ ಎಲ್ಲಿಗೆ ಬರುತ್ತದೆ, ಹೋಗುತ್ತದೆ ಎಂಬುದೇ ತಿಳಿಯುತ್ತಿಲ್ಲ ಎಂದು ಶಾಸಕ ರೇವಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ಹಾಗೂ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ. ಅನಿಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಶಾಸಕ ರೇವಣ್ಣ ಗಂಭೀರವಾಗಿ ಆರೋಪಿಸಿದರು.

ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ೮ ಹಾಸಿಗೆಗಳ ಐಸಿಯು ಘಟಕ ಹಾಗೂ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ ಜತೆಗೆ ಅರವಳಿಕೆ ವರ್ಕ್‌ಸ್ಟೇಷನ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಿ ಖರೀದಿಗಾಗಿ ೧೮ ಲಕ್ಷ ರು. ಬರುತ್ತದೆ, ತಾಲೂಕಿನಲ್ಲಿ ೩ ಕಿ.ಮೀ.ಗೆ ಒಂದು ಆಸ್ಪತ್ರೆ ಇದೆ, ಆದರೆ ಈ ೧೮ ಲಕ್ಷದ ಔಷಧಿ ಎಲ್ಲಿಗೆ ಬರುತ್ತದೆ, ಹೋಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇಲ್ಲಿ ಲೂಟಿ ನಡೆಸುತ್ತಿದ್ದು, ತಾಲೂಕಿನ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ಹಾಗೂ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ. ಅನಿಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪತ್ತೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಾಸಕ ಎಚ್.ಡಿ ರೇವಣ್ಣ ಒತ್ತಾಯಿಸಿದರು.

ನಾ ಹೇಳಿ ಕಳಿಸಿದ ಮಹಿಳೆಗೆ ಸರಿಯಾದ ಟ್ರೀಟ್‌ಮೆಂಟ್ ದೊರೆತಿಲ್ಲ, ಈ ತರಹದ ಬೇಜವಾಬ್ದಾರಿಯನ್ನು ವೈದ್ಯರು ಮಾಡಬಾರದು. ಆಸ್ಪತ್ರೆಯ ನರ್ಸ್‌ಗಳಾಗಲಿ, ಅಟೆಂಡರ್‌ಗಳಾಲಿ, ಡಾಕ್ಟರ್‌ಗಳ ಹಿಡಿತದಲ್ಲಿ ಇರಬೇಕು. ಡಾ. ಹೇಳಿದ ಕೆಲಸ ಮಾಡಬೇಕು, ತಾಲೂಕು ದಂಡಾಧಿಕಾರಿಗಳು ವಾರಕ್ಕೆ ಒಮ್ಮೆ ಪರಿಶೀಲನೆ ಮಾಡಬೇಕು, ಗ್ರಾಮೀಣ ಪ್ರದೇಶದ ಆಸ್ಪತ್ರೆಗಳ ಕುಂದುಕೊರತೆ ನೋಡಬೇಕು, ಕಂದಾಯ ಇಲಾಖೆ ಕೆಲಸದ ಜತೆಗೆ ಇತರೆ ಕೆಲಸಗಳನ್ನೂ ನೋಡಬೇಕು. ತೊಂದರೆ ನಿವಾರಣೆಗೆ ನನ್ನಿಂದ ಏನಾಗಬೇಕೆಂದು ತಿಳಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಮಾತನಾಡಿ, ಪ್ರಾರಂಭದಲ್ಲಿ ಇದ್ದ ೫೦ ಹಾಸಿಗೆಗಳ ಆಸ್ಪತ್ರೆ ೨೮೦ ಹಾಸಿಗೆಗಳ ಆಸ್ಪತ್ರೆಯಾಗಿ ನಿರ್ಮಾಣದ ಜತೆಗೆ ಸುಸಜ್ಜಿತ ವ್ಯವಸ್ಥೆಯಿಂದ ಕೂಡಿದೆ. ೨೫ಕ್ಕೂ ಹೆಚ್ಚು ತಜ್ಞ ವೈದ್ಯರು, ರಾಜ್ಯದಲ್ಲಿ ಒಂದನೇ ಸ್ಥಾನದಲ್ಲಿ ಡಯಾಲಿಸಿಸ್ ಹಾಗೂ ಐಸಿಯು ಹಾಗೂ ವೆಂಟಿಲೇಟರ್ ಘಟಕದಲ್ಲಿ ಸೇವೆ ನೀಡಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಸ್ಥಾಪಿಸಿದ ೨ ಆಕಿಜನ್ ಪ್ಲಾಂಟ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ೩೨ ಸ್ಲಾಯ್ಸ್ ವ್ಯವಸ್ಥೆಯ ಸಿಟಿ ಸ್ಕ್ಯಾನ್ ತಾಲೂಕು ಕೇಂದ್ರದಲ್ಲಿ ವ್ಯವಸ್ಥೆ ಮಾಡಿರುವುದು ಹೆಮ್ಮೆಯ ವಿಷಯವೆಂದರು.

ಹಲವಾರು ವಿಷಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿ, ಇತ್ತೀಚಿನ ವರ್ಷಗಳಲ್ಲಿ ಬಂಜೆತನ ಮಹಿಳೆಯನ್ನು ಕಾಡುತ್ತಿದ್ದು, ಬಂಜೆತನ ನಿವಾರಣಾ ಘಟಕ ಅಂದರೆ ಇನ್‌ಫರ್ಟಿನಿಟಿ ಸೆಂಟರ್ ಅಗತ್ಯವಿದ್ದು, ಶಾಸಕರು ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ತೋರಬೇಕೆಂದು ವಿನಂತಿಸಿ, ಈ ಸೌಲಭ್ಯ ನಮ್ಮೂರಿನ ಆಸ್ಪತ್ರೆಯಲ್ಲಿ ದೊರೆಯುವ ವ್ಯವಸ್ಥೆ ಕಲ್ಪಿಸಿದರೇ ಪರಿಪೂರ್ಣ ಆಸ್ಪತ್ರೆಯಾಗಲಿದೆ ಎಂದರು. ಮೇ ೩೧ಕ್ಕೆ ನಿವೃತ್ತಿ ಆಗುತ್ತಿರುವುದಾಗಿ ತಿಳಿಸಿ, ಶಾಸಕರ ಜನಪರ ಕಾಳಜಿ ಹಾಗೂ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಶಾಸಕ ಎಚ್.ಡಿ.ರೇವಣ್ಣ, ಡಾ. ಧನಶೇಖರ್, ಡಾ. ಸೆಲ್ವಕುಮಾರ್, ಡಾ. ನಾಗೇಂದ್ರ, ಡಾ. ಕುಸುಮಾ, ಡಾ.ರೇಖಾ, ಡಾ. ಅಶ್ವತಿ, ಡಾ. ಸತ್ಯಪ್ರಕಾಶ್, ಡಾ. ಲೋಕೇಶ್, ಡಾ. ಅಜಯ್ ಅವರನ್ನು ಸನ್ಮಾನಿಸಿದರು. ಡಾ. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಬಿಇಒ ಸೋಮಲಿಂಗೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಇತರರು ಇದ್ದರು.

Share this article