ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಪ್ರಜಾತಂತ್ರದ ಉಳಿವಿಗಾಗಿ ಕೋಮುವಾದಿ ಬಿಜೆಪಿ ಸೋಲಿಸಿ’ ಜನಜಾಗೃತಿ ಸಮಾವೇಶವನ್ನು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಈ ದೇಶದ ಪ್ರಜೆಗಳೆ. ಅಂಬೇಡ್ಕರ್ ರಚಿಸಿದ ಸಂವಿಧಾನವು ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಕೊಟ್ಟಿದೆ. ಇದು ಭಿಕ್ಷೆ ಅಲ್ಲ. ಆದರೆ ಮೋದಿ ಸರ್ಕಾರ ಸಿಎಎ, ಎನ್ಆರ್‌ಪಿ, ಎನ್ಆರ್‌ಸಿ ಜಾರಿಗೊಳಿಸಿ ದೇಶದ 140 ಕೋಟಿ ಜನರ ನಾಗರಿಕತ್ವಕ್ಕಾಗಿ ದಾಖಲೆ ಕೇಳುತ್ತಿರುವುದರ ಹಿಂದಿನ ಉದ್ದೇಶ ಈ ದೇಶದ ಬಡವರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರೆಂದು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ ಕುತಂತ್ರ ರೂಪಿಸಿದೆ ಎಂದು ದೂರಿದರು.ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕಳೆದ ವರ್ಷ 1 ಲಕ್ಷ 67 ಸಾವಿರ ಜನ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.60 ಜನ ದಿನಗೂಲಿಗಳು, ನಿರುದ್ಯೋಗಿ ಯುವಕರು. ಇಸ್ರೇಲ್, ರಷ್ಯಾದ ಯುದ್ಧ ಭೂಮಿಯಲ್ಲಿ ಕೆಲಸ ಮಾಡಲು ಭಾರತೀಯ ಜನರನ್ನು ರಫ್ತು ಮಾಡಲಾಗುತ್ತಿದೆ. ಹೀಗೆ ದೇಶದಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿದ್ದರೂ ಆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಸದಾ ಹಿಂದೂ-ಮುಸ್ಲಿಂ ಎಂದು ಜಪಿಸುವ ಮೂಲಕ ಸೌಹಾರ್ದದ ಹಂದರಕ್ಕೆ ಬೆಂಕಿ ಬಿಜೆಪಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇಂತಹ ದುರ್ದಿನಗಳಲ್ಲಿ ಚಳವಳಿ ಮತ್ತು ಜನರ ಅರಿವು ಮಾತ್ರ ದೇಶವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.