ರಾಹುಲ್‌ ಮಾತು ಕೇಳದೆ ತಪ್ಪು ಮಾಡಿದ್ರಾ ಖರ್ಗೆ?

KannadaprabhaNewsNetwork |  
Published : May 05, 2026, 02:00 AM IST
ಮಲ್ಲಿಕಾರ್ಜುನ ಖರ್ಗೆ | Kannada Prabha

ಸಾರಾಂಶ

ತಮಿಳುನಾಡು ರಾಜ್ಯದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷ ಹಾಗೂ ಆಡಳಿತರೂಢ ಡಿಎಂಕೆ ಪಕ್ಷಕ್ಕೆ ಹೀನಾಯ ಸೋಲುಂಟಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮಿಳುನಾಡು ರಾಜ್ಯದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷ ಹಾಗೂ ಆಡಳಿತರೂಢ ಡಿಎಂಕೆ ಪಕ್ಷಕ್ಕೆ ಹೀನಾಯ ಸೋಲುಂಟಾಗಿದೆ. ಇದು ಚುನಾವಣಾ ಪೂರ್ವ ಮೈತ್ರಿಕೂಟ ರಚನೆ ನಿರ್ಧಾರದಲ್ಲಿ ಎಡವಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿನ್ನಡೆ ಉಂಟುಮಾಡಿದೆ ಎಂಬ ವ್ಯಾಖ್ಯಾನ ಕೇಳಿ ಬಂದಿದೆ.

ಪಂಚರಾಜ್ಯಗಳ ಚುನಾವಣೆ ಪೂರ್ವದಲ್ಲಿ ತಮಿಳುನಾಡಿನಲ್ಲಿ ಯಾವ ಪಕ್ಷದ ಜತೆಗೆ ಚುನಾವಣೆಗೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್‌ನ ಉನ್ನತ ಮಟ್ಟದ ಸಭೆ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ಗಾಂಧಿ ಅವರು ನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷದ ಜೊತೆ ಚುನಾವಣೆಗೆ ಹೋಗೋಣ. ಆ ಪಕ್ಷದವರು ಕಾಂಗ್ರೆಸ್‌ ಜತೆ ಚುನಾವಣೆ ಎದುರಿಸಲು ಉತ್ಸುಕರಾಗಿದ್ದಾರೆ. ಜತೆಗೆ 60-65 ಕ್ಷೇತ್ರಗಳನ್ನು ಕಾಂಗ್ರೆಸ್‌ ಬಿಟ್ಟುಕೊಡಲಿದ್ದಾರೆ. ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಯುವ ಮತದಾರರು ವಿಜಯ್‌ ಜತೆ ನಿಲ್ಲುವ ಮನಸ್ಸು ಮಾಡಿದ್ದಾರೆ. ಅಲ್ಲಿ ಬದಲಾವಣೆಯ ಸಾಧ್ಯತೆ ಕಾಣುತ್ತಿದೆ ಎಂದು ರಾಹುಲ್‌ ತಮ್ಮ ಅಭಿಪ್ರಾಯ ಮಂಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಡಿಎಂಕೆ ಕೈಬಿಡಲು ಆಕ್ಷೇಪ:

ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಸೆಲ್ವಪೆರುತಂಗೈ ಅವರು ಡಿಎಂಕೆ ಬಿಟ್ಟು ಟಿವಿಕೆ ಜೊತೆ ಹೋಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಡಿಎಂಕೆ ಕಾಂಗ್ರೆಸ್‌ ಜತೆ ಹಲವು ವರ್ಷಗಳಿಂದ ಮೈತ್ರಿಯಲ್ಲಿದೆ. ಈ ಮೈತ್ರಿ ಮುರಿಯುವುದು ಬೇಡ. ಹೊಸ ಪಕ್ಷದ ಜತೆಗೆ ಪ್ರಯೋಗಕ್ಕೆ ಕೈ ಹಾಕಿ ವಿಫಲವಾದರೆ ಡಿಎಂಕೆ ವಿಶ್ವಾಸ ಕೈಗೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.

ಇದೀಗ ರಾಹುಲ್‌ಗಾಂಧಿ ಊಹೆ ನಿಜವಾಗಿದ್ದು, ಖರ್ಗೆ ಅವರ ನಿರ್ಧಾರ ಪಕ್ಷಕ್ಕೆ ನಷ್ಟ ತಂದೊಡ್ಡಿದೆ. ಕಾಂಗ್ರೆಸ್‌ ಪಕ್ಷ ಟಿವಿಕೆ ಜತೆ ಮೈತ್ರಿ ಮಾಡಿಕೊಂಡು 60-65 ಸ್ಥಾನ ಪಡೆದಿದ್ದರೆ ಕಾಂಗ್ರೆಸ್ ಸಾಂಪ್ರದಾಯಿಕ ಮತ ಹಾಗೂ ವಿಜಯ್‌ ಪರ ಸೃಷ್ಟಿಯಾಗಿದ್ದ ಅಲೆಯಿಂದ ಕನಿಷ್ಠ 30-40 ಸ್ಥಾನ ಗೆದ್ದು, ಡಿಸಿಎಂ ಸ್ಥಾನದ ಜತೆಗೆ ಅಧಿಕೃತವಾಗಿ ಸರ್ಕಾರ ರಚನೆಯ ಅವಕಾಶವಿತ್ತು.

ಈಗಾಗಲೇ ಕೇರಳದಲ್ಲಿ ಭಾರಿ ಬಹುಮತದೊಂದಿಗೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬಂದಿದೆ. ಹೀಗಾಗಿ ತಮಿಳುನಾಡು ಸೇರಿ ಕಾಂಗ್ರೆಸ್‌ ಮೈತ್ರಿಕೂಟವೂ ಎರಡು ರಾಜ್ಯಗಳಲ್ಲಿ ಗೆದ್ದಂತಾಗಿ ಬಿಜೆಪಿಗೆ ಬಹುತೇಕ ಸಮ ಪೈಪೋಟಿ ನೀಡಿದಂತಾಗುತ್ತಿತ್ತು. ಹೀಗಾಗಿ ಖರ್ಗೆ ಹಾಗೂ ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷರ ನಿರ್ಧಾರ ಬಗ್ಗೆ ಹೈಕಮಾಂಡ್‌ಗೆ ಬೇಸರ ಉಂಟಾಗಿದೆ. ಇದು ರಾಜಕೀಯವಾಗಿ ಖರ್ಗೆ ಅವರಿಗೆ ಹಿನ್ನಡೆ ಉಂಟು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯ ಮಾರಾಟ: 13 ವರ್ಷದ ದಾಖಲೆ ಉಡೀಸ್‌!
ಆರೋಗ್ಯ ಇಲಾಖೆ ಅಧಿಕಾರಿ, ನೌಕರರ ನಿಸ್ವಾರ್ಥ ಸೇವೆ ಸ್ಮರಿಸಬೇಕು: ಕೆ.ಎಸ್.ಆನಂದ್