ಬಳ್ಳಾರಿ: ಕಲಬುರಗಿಯಲ್ಲಿ ಈಚೆಗೆ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ನೀಡಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಅನುದಾನ ಭಾಗಶಃ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಪಾಲಾಗಿದೆ. ಬಳ್ಳಾರಿ ಸೇರಿದಂತೆ ಉಳಿದ ಎಲ್ಲ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಆರೋಪಿಸಿದರು.
ಕಲಬುರಗಿ ಕಲ್ಯಾಣ ಅಭಿವೃದ್ಧಿ ಮಂಡಳಿಯೇ?
ಸಚಿವ ಸಂಪುಟ ಸಭೆಯಲ್ಲಿ ಒಟ್ಟು ₹11,770 ಕೋಟಿ ಮೊತ್ತದ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಬಳ್ಳಾರಿ ಜಿಲ್ಲೆಗೆ ₹10 ಕೋಟಿ ವೆಚ್ಚದಲ್ಲಿ ಬಳ್ಳಾರಿ ಬಿಮ್ಸ್ (ಒಪಿಡಿ) ಆಸ್ಪತ್ರೆಗೆ ಎಂಆರ್‌ಐ ಸ್ಕ್ಯಾನ್, ಖಾಸಗಿ ಸಹಭಾಗಿತ್ವದಲ್ಲಿ ಬಳ್ಳಾರಿ ಕೋಟೆಗೆ ರೋಪ್‌ವೇ ನಿರ್ಮಿಸುವ ಯೋಜನೆ ರೂಪಿಸುವುದಾಗಿ ಹೇಳಿರುವುದು ಬಿಟ್ಟರೆ, ಬಳ್ಳಾರಿ ಜನರ ಬಹುವರ್ಷಗಳ ಬೇಡಿಕೆಯಾದ ರಿಂಗ್ ರಸ್ತೆ, ವಿಮಾನ ನಿಲ್ದಾಣ, ಮೆಣಸಿನಕಾಯಿ ಮಾರುಕಟ್ಟೆ ಸೇರಿದಂತೆ ಮತ್ತಿತರ ಪ್ರಗತಿ ಕಾರ್ಯಗಳಿಗೆ ಬಿಡಿಗಾಸೂ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆಂದೇ ₹7200 ಕೋಟಿ ನೀಡಲಾಗಿದೆ. ಪ್ರತಿಯೊಂದು ಇಲಾಖೆಯ ಯೋಜನೆಯ ಹಣ ಕಲಬುರಗಿ ಹಾಗೂ ಚಿತ್ತಾಪುರ ಕ್ಷೇತ್ರಕ್ಕೆ ಹೆಚ್ಚು ಹಂಚಿಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕಲಬುರಗಿ ಅಭಿವೃದ್ಧಿ ಮಂಡಳಿಯಂತೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಸಹ ಈ ಭಾಗದ ಜನರ ನಿರೀಕ್ಷೆಗಳು ಹಾಗೂ ಪ್ರಗತಿದಾಯಿಕ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಮೂರು ಜಿಲ್ಲೆಗಳಿಗೆ ಮಾತ್ರ ಬಹುತೇಕ ಅನುದಾನ ನೀಡಿದೆ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ಈ ಭಾಗದ ಜಿಲ್ಲೆಗಳಿಗೆ ಅನುಕೂಲವಾಗಿಲ್ಲ ಎಂದಾದರೆ ನಾವೇಕೆ ಕಲಬುರಗಿ ಕಂದಾಯ ವಿಭಾಗದಲ್ಲಿರಬೇಕು. ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳು ಪ್ರತ್ಯೇಕವಾಗಿ ಕಂದಾಯ ವಿಭಾಗ ಮಾಡುವಂತೆ ಒತ್ತಾಯಿಸಿ ಹೋರಾಟ ರೂಪಿಸುತ್ತೇವೆ. ಇಲ್ಲದಿದ್ದರೆ ಈ ಭಾಗದ ಜಿಲ್ಲೆಗಳಿಗೆ ಉಳಿಗಾಲವಿಲ್ಲ ಎಂದರು.
ನಾಯಕತ್ವ ಸತ್ತುಹೋಗಿದೆ
ಬಳ್ಳಾರಿಯನ್ನು ಎಷ್ಟರ ಮಟ್ಟಿಗೆ ಕಡೆಗಣಿಸಲಾಗಿದೆ ಎಂದರೆ ರಾಜ್ಯೋತ್ಸವ ಪ್ರಶಸ್ತಿ, ವಿವಿಧ ನಿಗಮಗಳ ನೇಮಕ, ಸಿಂಡಿಕೇಟ್ ಸದಸ್ಯರ ನೇಮಕ ಹೀಗೆ ಪ್ರತಿಯೊಂದರಲ್ಲೂ ಜಿಲ್ಲೆಯನ್ನು ಮೂಲೆಗುಂಪು ಮಾಡಲಾಗಿದೆ. ವಿಪರ್ಯಾಸ ಎಂದರೆ ಈ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮಾತನಾಡುತ್ತಿಲ್ಲ. ಪ್ರತಿಪಕ್ಷ ಬಿಜೆಪಿಯವರು ಪಕ್ಷದ ಕರೆಯ ಹೋರಾಟಕ್ಕೆ ಸೀಮಿತವಾಗಿದ್ದಾರೆಯೇ ವಿನಃ, ಜಿಲ್ಲೆಯ ಅಭಿವೃದ್ಧಿ ನೆಲೆಯ ಯಾವ ಧ್ವನಿ ಎತ್ತುತ್ತಿಲ್ಲ ಎಂದು ಪ್ರತಾಪ ರೆಡ್ಡಿ ಟೀಕಿಸಿದರು.