ಒಂಟಿ ಚಕ್ರದ ಸೈಕಲ್‌ನಲ್ಲೇ ಕಾಶ್ಮೀರ ಪ್ರಯಾಣ!

KannadaprabhaNewsNetwork | Updated : Feb 26 2024, 01:38 AM IST

ಸಾರಾಂಶ

ಈ ಯುವಕರ ತಂಡಕ್ಕೆ ಮಂಗಳೂರಿನ ಎಂಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್, ಎಂಎಸ್ ಸ್ಪೋರ್ಟ್ಸ್ ಹೀಗೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿವೆ. ಮಂಗಳೂರಿನಿಂದ ಕಾಶ್ಮೀರದವರೆಗಿನ ಪ್ರಯಾಣಕ್ಕೆ ಸಾರ್ವಜನಿಕರೂ ‘ಆಲ್‌ ದ ಬೆಸ್ಟ್‌’ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಮಾನ್ಯವಾಗಿ ಓಡಿಸುವ ಸೈಕಲ್‌ಗೆ ಇರೋದು ಎರಡು ಚಕ್ರ. ಅದರಲ್ಲಿ ಎದುರಿನ ಚಕ್ರ ತೆಗೆದರೆ ಸವಾರಿ ಸಾಧ್ಯವೇ? ವೀಲಿಂಗ್‌ ಮೂಲಕ ಸರ್ಕಸ್‌ ಮಾಡಿದರೂ ಬಹುತೇಕರಿಗೆ ನಾಲ್ಕು ಪೆಡಲ್‌ ತುಳಿಯೋದೆ ಕಷ್ಟ. ಅಂಥದ್ದರಲ್ಲಿ ಈ ಯುವಕ ಒಂಟಿ ಚಕ್ರದ ಸೈಕಲ್‌ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೋಗುವ ಮಹಾಸಾಹಸಕ್ಕೆ ಕೈಹಾಕಿದ್ದಾರೆ ಎಂದರೆ ನಂಬ್ತೀರಾ?

ನಂಬಲೇಬೇಕು. ಕೇರಳ ಮೂಲದ ಸಾನಿದ್ ಅವರು ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ಲೇಹ್ ಲಡಕ್‌ವರೆಗೆ ಒಂಟಿ ಚಕ್ರದ ಸೈಕಲ್ ಮೂಲಕ ಪ್ರಯಾಣ ಬೆಳೆಸುತ್ತಿರುವ ಇವರು, ಈಗಾಗಲೇ ಕನ್ಯಾಕುಮಾರಿಯಿಂದ ಮಂಗಳೂರಿಗೆ ತಲುಪಿದ್ದಾರೆ.

ಸೈಕಲ್‌ನ ಎದುರಿನ ಚಕ್ರ ತೆಗೆದು ಹಿಂದಿನ ಚಕ್ರದಲ್ಲೇ ಸಂಚರಿಸುವುದು ಈ ಸೈಕಲ್‌ ಪ್ರಯಾಣದ ವಿಶೇಷತೆ. ಸಾನಿದ್‌ ಅವರು ಒಂಟಿ ಚಕ್ರದ ಸೈಕಲ್‌ನಲ್ಲಿ ಯಾತ್ರೆ ನಡೆಸುತ್ತಿದ್ದರೆ, ಅವರ ಸ್ನೇಹಿತರು ಎರಡು ಚಕ್ರದ ಸೈಕಲ್‌ನಲ್ಲಿ ಸಾಥ್‌ ನೀಡುತ್ತಿದ್ದಾರೆ. ಇವರು ಸಂಚರಿಸುವ ದಾರಿಯುದ್ದಕ್ಕೂ ಈ ವಿಶೇಷ ದೃಶ್ಯವನ್ನು ಜನರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ.

ಡ್ರಗ್ಸ್‌ ಬಿಡಿ ಸಾಧಕರಾಗಿ: ದೇಶಾದ್ಯಂತ ಮಾದಕ ವ್ಯಸನ ಜಾಲ ಹರಡಿದ್ದು, ಅಮಲು ಪದಾರ್ಥಗಳಿಗೆ ಯುವ ಜನತೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ಸಾಧನೆಯಿಂದ ವಿಮುಖ ಮಾಡುತ್ತಿದೆ. ಇದರ ವಿರುದ್ಧ ಏನಾದರೂ ವಿಭಿನ್ನವಾಗಿ ಜಾಗೃತಿ ಮೂಡಿಸಬೇಕು ಎಂಬ ಛಲ ತೊಟ್ಟು ಈ ಒಂಟಿ ಚಕ್ರದ ಸೈಕಲ್‌ ಪ್ರಯಾಣಕ್ಕೆ ಕೈಹಾಕಿದ್ದಾಗಿ ಸಾನಿದ್‌ ತಿಳಿಸಿದರು.

ಈ ಸ್ನೇಹಿತರು ಎರಡು ತಿಂಗಳ ಹಿಂದೆ ಪ್ರಯಾಣ ಆರಂಭಿಸಿದ್ದಾರೆ. ಸಾನಿದ್‌ ೨ ಸಾವಿರ ಕಿ.ಮೀ.ನ್ನು ಒಂಟಿ ಚಕ್ರದಲ್ಲೇ ಸಂಚರಿಸಿ ಮಂಗಳೂರು ತಲುಪಿದ್ದಾರೆ. ಕರ್ನಾಟಕದಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗಿದೆ. ಜನರು ಆಸಕ್ತಿಯಿಂದ ಕೇಳುತ್ತಿದ್ದಾರೆ ಎಂದು ಸಾನಿದ್‌ ಹೇಳಿದರು.

ಈ ಯುವಕರ ತಂಡಕ್ಕೆ ಮಂಗಳೂರಿನ ಎಂಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್, ಎಂಎಸ್ ಸ್ಪೋರ್ಟ್ಸ್ ಹೀಗೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿವೆ. ಮಂಗಳೂರಿನಿಂದ ಕಾಶ್ಮೀರದವರೆಗಿನ ಪ್ರಯಾಣಕ್ಕೆ ಸಾರ್ವಜನಿಕರೂ ‘ಆಲ್‌ ದ ಬೆಸ್ಟ್‌’ ಹೇಳಿದರು.

Share this article