ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ

KannadaprabhaNewsNetwork |  
Published : Jul 28, 2025, 12:30 AM IST
ಫೋಟೋ | Kannada Prabha

ಸಾರಾಂಶ

ಮ್ಯೂಜಿಕಲ್ ಚೇರ್‌, ನಿಂಬೆಹಣ್ಣು ಚಮಚ ಮೊದಲಾದ ಮನೋರಂಜನಾ ಓಟದ ಸ್ಪರ್ಧೆಗಳೂ ನಡೆದವು

ಕನ್ನಡಪ್ರಭ ವಾರ್ತೆ ಮೈಸೂರು

ಪತ್ರಕರ್ತರ ಕುಟುಂಬದ ಮಹಿಳೆಯರು–ಮಕ್ಕಳ ಆಟೋಟದೊಂದಿಗೆ ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ಭಾನುವಾರ ಸಂಭ್ರಮದ ತೆರೆ ಬಿದ್ದಿತು. ಪತ್ರಕರ್ತರು ತಮ್ಮ ಮಡದಿಯನ್ನು ಹೊತ್ತು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷ.

ಓವಲ್‌ ಮೈದಾನದಲ್ಲಿ ನಡೆದ ಕ್ರೀಡಾಕೂಟದ ಎರಡನೇ ದಿನದಂದು ಪುರುಷರು ಹಾಗೂ ಮಹಿಳೆಯರಿಗಾಗಿ ವಿವಿಧ ಓಟ, ಶಾಟ್‌ಪಟ್‌ ಸ್ಪರ್ಧೆಗಳು ನಡೆದವು. ಜೊತೆಗೆ ಮಹಿಳೆಯರು ಚಂದದ ರಂಗೋಲಿಗಳ ಚಿತ್ತಾರದ ಮೂಲಕ ಗಮನ ಸೆಳೆದರು. ಮ್ಯೂಜಿಕಲ್ ಚೇರ್‌, ನಿಂಬೆಹಣ್ಣು ಚಮಚ ಮೊದಲಾದ ಮನೋರಂಜನಾ ಓಟದ ಸ್ಪರ್ಧೆಗಳೂ ನಡೆದವು.ಹೆಂಡತಿಯನ್ನು ಹೊತ್ತು ಓಡುವ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ ಬೆಟ್ಟದಪುರ ಅರೆಕಾಲಿಕ ವರದಿಗಾರ ಪ್ರಸನ್ನ–ಸೀಮಾ ಮೊದಲಿಗರಾಗಿ ಗುರಿ ಮುಟ್ಟಿ ಪ್ರಶಂಸೆ ಗಿಟ್ಟಿಸಿದರು. ರವಿ ಹಾಗೂ ಲಕ್ಷ್ಮಿ ದ್ವಿತೀಯ ಹಾಗೂ ರಂಗಸ್ವಾಮಿ–ಜ್ಯೋತಿ ದಂಪತಿ ತೃತೀಯ ಬಹುಮಾನ ಪಡೆದರು

ಸನ್ಮಾನ:

ತಿ. ನರಸೀಪುರ ಪಿ.ಯು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಕಲಿಯಂಡ ರೇಷ್ಮಾ ಚೆಂಗಪ್ಪ, ‘ಪ್ರಜಾವಾಣಿ’ ಕ್ರೀಡಾ ವಿಭಾಗದ ಮುಖ್ಯ ವರದಿಗಾರ ಗಿರೀಶ ದೊಡ್ಡಮನಿ ಹಾಗೂ 19 ವರ್ಷದ ಒಳಗಿನವರ ವಲಯ ಮಟ್ಟದ ಕ್ರಿಕೆಟ್‌ ಆಟಗಾರ ಎಚ್‌.ಎನ್. ರೋಹನ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕ್ರಿಕೆಟ್‌ ಟೂರ್ನಿ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಬಹುಮಾನ ವಿತರಿಸಿದರು. ‘ಪತ್ರಕರ್ತರು ತಮ್ಮ ವೃತ್ತಿ ಜೀವನಕ್ಕಾಗಿ ವೈಯಕ್ತಿಕ ಜೀವನವನ್ನು ಬಲಿ ಕೊಡಬೇಕಾಗುತ್ತದೆ. ಅವರು ಮತ್ತು ಕುಟುಂಬದವರಿಗಾಗಿ ಕ್ರೀಡಾಕೂಟ ಆಯೋಜನೆ ಒಳ್ಳೆಯ ಕೆಲಸ. ಪತ್ರಕರ್ತರ ಜೊತೆ ನಮ್ಮ ಸಂಬಂಧ ಚೆನ್ನಾಗಿ ಇರದಿದ್ದರೆ ನಾವು ಅವಕೃಪೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು’ ಎಂದು ಹೇಳಿದರು.‘ಜಿಲ್ಲಾ ಪತ್ರಕರ್ತರ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಿ ನಮ್ಮ ಸರ್ಕಾರದ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕರಾದ ಅನಿಲ್ ಚಿಕ್ಕಮಾದು, ಕೆ. ಹರೀಶ್‌ ಗೌಡ, ಡಿ. ರವಿಶಂಕರ್ ಮಾತನಾಡಿದರು. ಎಸಿಪಿ ರವಿಪ್ರಸಾದ್, ಉದ್ಯಮಿ ಎ.ಪಿ. ನಾಗೇಶ್, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್‌, ಕಾರ್ಯದರ್ಶಿ ಧರ್ಮಾಪುರ ನಾರಾಯಣ, ರಾಜು ಕಾರ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ