ಈದ್ ಮಿಲನ್ ಸೌಹಾರ್ದ ಕೂಟ
ಬೇಲೂರು: ವಿವಿಧ ಜಾತಿ ಧರ್ಮಗಳಿಂದ ಭಾರತ ದೇಶ ಒಟ್ಟಾಗಿದೆ. ಇಲ್ಲಿ ಮುಸ್ಲಿಂ ಸಮುದಾಯದವರು ಈದ್ ಉಲ್ ಫಿತರ್ ಹಾಗೂ ಬಕ್ರೀದ್ ಹಬ್ಬಗಳನ್ನು ಸಡಗರದಿಂದ ಆಚರಣೆ ಮಾಡುತ್ತಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ನಿಕಟಪೂರ್ವ ಅಧ್ಯಕ್ಷ ಮುಜೀಬ್ ಉರ್ ರೆಹಮಾನ್ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಹಿರಾ ಸೆಂಟರ್‌ನಲ್ಲಿ ಆಯೋಜನೆ ಮಾಡಲಾಗಿದ್ದ ಈದ್ ಮಿಲನ್ ಸೌಹಾರ್ದ ಕೂಟವನ್ನು ಉದ್ದೇಶಿಸಿ ಮಾತನಾಡಿ, ‘ಪವಿತ್ರ ರಂಜಾನ್ ತಿಂಗಳಲ್ಲಿ ಮಾಡುವ ಉಪವಾಸದಿಂದ ಸಹನೆ ಹಾಗೂ ದೇವರು ನಮ್ಮನ್ನು ನೋಡುತ್ತಿದ್ದಾನೆ ಎಂಬ ಅಂಶಗಳನ್ನು ಕಲಿಯುತ್ತೇವೆ. ಯಾವುದೇ ಹಬ್ಬವನ್ನು ಆಚರಣೆ ಮಾಡುವ ಮೊದಲು ನಾವು ಬಡವರಿಗೆ ದಾನ ನೀಡಬೇಕು’ ಎಂದು ಹೇಳಿದರು.ಜಮಾ ಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ‘ನಾವು ಇಂದು ವಾಟ್ಸಾಪ್ ಯೂನಿವರ್ಸಿಟಿಯಲ್ಲಿದ್ದೇವೆ. ಸಾಧಕ ಬಾಧಕಗಳನ್ನು ಚರ್ಚಿಸದೆ ಧರ್ಮಗಳ ನಡುವೆ ವಿಷಬೀಜವನ್ನು ಬಿತ್ತಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದು ಆತಂಕಕಾರಿ. ಮೌಲ್ಯವಿಲ್ಲದ ಸಮಾಜದಲ್ಲಿ ಒಳ್ಳೆಯ ಗುಣಗಳನ್ನು ಹುಡುಕುವ ಪರಿಸ್ಥಿತಿಗೆ ತಲುಪಿದ್ದೇವೆ. ದೇವನೊಬ್ಬ ನಾಮ ಹಲವು ಎಂಬಂತೆ ನಾವು ಪೂಜಿಸುವ ದೇವರನ್ನು ಮೊದಲು ಪ್ರೀತಿಸುವುದನ್ನು ಕಲಿತಾಗ ಮಾತ್ರ ನಾವು ನಮ್ಮ ನೆರೆಹೊರೆಯವರನ್ನು ಪ್ರೀತಿಸಲು ಕಲಿಯುತ್ತೇವೆ. ಇಡೀ ಪ್ರಪಂಚದಲ್ಲಿ ಕೆಟ್ಟ ಸಂದೇಶವನ್ನು ಸಮಾಜಕ್ಕೆ ಸಾರುವ ಯಾವುದೇ ಧರ್ಮವಿಲ್ಲ’ ಎಂದು ನುಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಹೋಬಳಿ ಅಧ್ಯಕ್ಷ ಯು.ಎಂ.ತೇಜ್‌ಪಾಲ್ ಮಾತನಾಡಿ, ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿಕೊಡುತ್ತಿವೆ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಯು.ಪೃಥ್ವಿ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಪಿ.ಬಸವರಾಜು, ರಿಫಾ ಪ್ಲಾಂಟರ್ಸ್ ಅಧ್ಯಕ್ಷ ನೂಮಾನ್ ಆದಿಲ್, ವಿಶ್ವ ಕರ್ಮ ಸಂಘದ ಅಧ್ಯಕ್ಷ ವಿಜಯಾಚಾರ‍್ಯ, ಗಾಣಿಗರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತು ಜಮಾಅತೆಯ ಎಲ್ಲಾ ಪದಾಧಿಕಾರಿಗಳು ಇದ್ದರು.
ಬೇಲೂರಿನ ಅರೇಹಳ್ಳಿಯ ಹಿರಾ ಸೆಂಟರ್‌ನಲ್ಲಿ ಈದ್ ಮಿಲನ್ ಸೌಹಾರ್ದ ಕೂಟವನ್ನು ಆಯೋಜಿಸಲಾಗಿತ್ತು.