ಪರೀಕ್ಷೆ ಭೀತಿಯಿಂದ ತಲೆಮರೆಸಿದ್ದ ದಿಗಂತ್‌ - 11 ದಿನಗಳಿಂದ ದಕ್ಷಿಣ ಕನ್ನಡ ಕಂಗೆಡಿಸಿದ್ದ ಪ್ರಕರಣ

KannadaprabhaNewsNetwork |  
Published : Mar 10, 2025, 12:19 AM ISTUpdated : Mar 10, 2025, 11:47 AM IST
rajasthan reet 2024 exam day rules

ಸಾರಾಂಶ

ಫೆ.25ರಂದು ಮನೆಯಿಂದ ನಾಪತ್ತೆಯಾದ ದಿಗಂತ್‌ 11 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆಯಾಗಿದ್ದ. ಬಳಿಕ ಆತನನ್ನು ಪೊಲೀಸರು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.  

 ಮಂಗಳೂರು : ಹಲವು ಅನುಮಾನಗಳಿಗೆ ಕಾರಣವಾಗಿದ್ದ ಬಾಲಕ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಇದೇ ವೇಳೆ ಈಗ ಪತ್ತೆಯಾಗಿರುವ ಬಂಟ್ವಾಳ ತಾಲೂಕು ಫರಂಗಿಪೇಟೆ ನಿವಾಸಿ ದಿಗಂತ್‌, ಪರೀಕ್ಷೆ ಭೀತಿಯಿಂದ ತಲೆಮರೆಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಫೆ.25ರಂದು ಮನೆಯಿಂದ ನಾಪತ್ತೆಯಾದ ದಿಗಂತ್‌ 11 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆಯಾಗಿದ್ದ. ಬಳಿಕ ಆತನನ್ನು ಪೊಲೀಸರು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ಹೇಳಿದ್ದ ದಿಗಂತ್‌, ಬಳಿಕ ಪೊಲೀಸ್‌ ವಿಚಾರಣೆಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸಿದ್ದು, ಒತ್ತಡಕ್ಕೆ ಒಳಗಾಗಿ ಪರೀಕ್ಷೆ ಭೀತಿಯಿಂದ ನಾಪತ್ತೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾನೆ ಎಂದು ದ.ಕ. ಜಿಲ್ಲಾ ಎಸ್ಪಿ ಯತೀಶ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಿಗಂತ್‌ನನ್ನು ಪ್ರಾಥಮಿಕ ವಿಚಾರಣೆ ನಡೆಸಿ ಸಿಡಬ್ಲ್ಯೂಸಿ(ಮಕ್ಕಳ ಕಲ್ಯಾಣ ಸಮಿತಿ) ಮುಂದೆ ಹಾಜರುಪಡಿಸಿ ಬೊಂದೇಲ್‌ನ ಬಾಲಕರ ಮಂದಿರಕ್ಕೆ ಹಸ್ತಾಂತರಿಸಲಾಗಿದೆ. ಬಾಲಕನ ನಾಪತ್ತೆ ಬಗ್ಗೆ ಹೈಕೋರ್ಟ್‌ಗೆ ಆತನ ಹೆತ್ತವರು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿರುವುದರಿಂದ ಆತನನ್ನು ಮಾ.12ರಂದು ಬೆಂಗಳೂರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಳಿಕ ನ್ಯಾಯಾಲಯ ನಿರ್ದೇಶನದಂತೆ ಆತನ ಮನೆಗೆ ಅಥವಾ ಹಾಸ್ಟೆಲ್‌ಗೆ ಕಳುಹಿಸಲಾಗುವುದು. ಅಲ್ಲಿವರೆಗೆ ಆತ ಬಾಲಮಂದಿರದಲ್ಲಿ ಇರಲಿದ್ದು, ಆತನಿಗೆ ತಜ್ಞರು ಕೌನ್ಸೆಲಿಂಗ್‌ ನಡೆಸಲಿದ್ದಾರೆ ಎಂದರು.

ಫೆ.25ರಂದು ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಕಿದೆಬೆಟ್ಟು ಮನೆಯಿಂದ ಹೊರಟ ದಿಗಂತ್‌, ಏಕಾಂಗಿಯಾಗಿ ಕೇವಲ 500 ರು. ತೆಗೆದುಕೊಂಡು ನೇರವಾಗಿ ರೈಲ್ವೆ ಹಳಿಯಲ್ಲಿ ಮುನ್ನಡೆದಿದ್ದ. ಅರ್ಕುಳದಲ್ಲಿ ಹಳಿಯಲ್ಲೇ ಮೊಬೈಲ್‌, ಬೂಟು, ವಾಚನ್ನು ಬಿಟ್ಟು ಮುಖ್ಯರಸ್ತೆಗೆ ಬಂದಿದ್ದ. ರಾತ್ರಿ ವೇಳೆ ಯಾವುದೋ ಬೈಕ್‌ ಏರಿ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ತಲುಪಿದ್ದ. ಅಲ್ಲಿ ರಾತ್ರಿಯೇ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದ.

ಮರುದಿನ ಶಿವಮೊಗ್ಗದಿಂದ ರೈಲಿನಲ್ಲಿ ಮೈಸೂರು ಮೂಲಕ ಕೆಂಗೇರಿಗೆ ಸಂಚರಿಸಿದ್ದ. ಅಷ್ಟರಲ್ಲಿ ಆತನ ಪಾಕೆಟ್‌ನಲ್ಲಿದ್ದ ಹಣ ಖಾಲಿಯಾಗಿತ್ತು. ಬೇರೆ ಹಣ ಇಲ್ಲದೆ ಆತ ಅಲ್ಲಿ ರೈಲು ಇಳಿದು ನಂದಿಬೆಟ್ಟಕ್ಕೆ ಯಾರದೋ ಖಾಸಗಿ ಬೈಕ್‌ನಲ್ಲಿ ಡ್ರಾಪ್‌ ಪಡೆದಿದ್ದ. ಅಲ್ಲಲ್ಲಿ ಸ್ವಲ್ಪ ನಡೆದುಕೊಂಡು ಹೋಗಿದ್ದ. ನಂದಿಬೆಟ್ಟದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಎರಡು ದಿನ ಕೆಲಸ ಮಾಡಿ ಸ್ವಲ್ಪ ಹಣ ಸಂಪಾದಿಸಿದ್ದ.

ನಂದಿಬೆಟ್ಟದಿಂದ ಮತ್ತೆ ಕೆಂಗೇರಿಗೆ ತೆರಳಿ ಅಲ್ಲಿಂದ ಕೈಯಲ್ಲಿರುವ ದುಡ್ಡಿನಲ್ಲಿ ಶುಕ್ರವಾರ ರಾತ್ರಿ ಮುರುಡೇಶ್ವರ ರೈಲು ಏರಿದ್ದ. ಈ ರೈಲಿನಲ್ಲಿ ಶನಿವಾರ ಬೆಳಗ್ಗೆ ಉಡುಪಿ ತಲುಪಿದ್ದ. ಆಗ ಆತ ದುಡಿದಿದ್ದ ಹಣ ಖರ್ಚಾಗಿದ್ದು, ಊಟ ಹಾಗೂ ಬಟ್ಟೆ ಖರೀದಿಗೆ ಮಧ್ಯಾಹ್ನ ಉಡುಪಿ ಡಿಮಾರ್ಟ್‌ಗೆ ಬಂದಿದ್ದ. ಅಲ್ಲಿ ಖರೀದಿಗೆ ಯತ್ನಿಸಿ ದುಡ್ಡಿಲ್ಲದೆ ವಾಪಸ್‌ ಹೋಗಲು ಯತ್ನಿಸಿದಾಗ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಉಡುಪಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಡಿಷನಲ್‌ ಎಸ್ಪಿ ರಾಜೇಂದ್ರ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್‌, ಇನ್‌ಸ್ಪೆಕ್ಟರ್‌ ಶಿವಕುಮಾರ್‌ ಇದ್ದರು.

ನಂದಿಬೆಟ್ಟ ರೆಸಾರ್ಟ್‌ನಲ್ಲಿ ಮೂರು ದಿನ ದುಡಿದು 3 ಸಾವಿರ ರು. ಸಂಪಾದಿಸಿದ್ದ ದಿಗಂತ್‌ 

ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಉಡುಪಿಗೆ ಹತ್ತಿದ್ದ. ಶನಿವಾರ ಬೆಳಗ್ಗೆ ಫರಂಗಿಪೇಟೆಯಲ್ಲಿ ರೈಲಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ನೋಡಿದ್ದ. ರೈಲಿನ ಕಿಟಕಿ ಬಳಿ ನಿಂತು ತನ್ನ ಮನೆಯನ್ನು ಗಮನಿಸಿದ್ದ. ರೈಲಿನ ಟ್ರ್ಯಾಕ್‌ ಸುತ್ತಮುತ್ತ ಡ್ರೋಣ್‌ ಹಾರಾಟ, ಪೊಲೀಸರ ಕೂಂಬಿಂಗ್‌ ನೋಡಿದ್ದ. ಈ ವೇಳೆ ಪೊಲೀಸರು ಮನೆ ಬಳಿಯ ಕೆರೆಯಲ್ಲೂ ಈತನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದರು. ಇದನ್ನು ರೈಲಿನಿಂದಲೇ ನೋಡಿದ ದಿಗಂತ್‌, ಕೆರೆ ಬಳಿ ಏನು ಹುಡುಕುತ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾನೆ. ಕೆರೆಯ ಬಳಿಯ ಮೋರಿಯಲ್ಲಿ ಕೆಸರು ತೆರವುಗೊಳಿಸಲು ಅಗೆಯುತ್ತಿದ್ದರು. ಅದನ್ನು ಕೂಡ ದಿಗಂತ್‌ ಪ್ರಶ್ನಿಸಿದ್ದಾನೆ.

ಮನೆಯಿಂದ ಹೊರಟು ರೈಲು ಕಂಬಿಯಲ್ಲಿ ಸಾಗುತ್ತಿದ್ದಾಗ ಆತನ ಪಾದದಲ್ಲಿ ಗಾಯ ಉಂಟಾಗಿತ್ತು. ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿತ್ತು. ಹಾಗಾಗಿ ಚಪ್ಪಲಿಯನ್ನು ಅಲ್ಲೇ ಬಿಟ್ಟೆ ಎಂದು ಪೊಲೀಸರಲ್ಲಿ ತಿಳಿಸಿದ್ದಾನೆ.

ನಾಪತ್ತೆಯಾದ ಈ 11 ದಿನಗಳಲ್ಲಿ ಆತ ಯಾರನ್ನೂ ಸಂಪರ್ಕಿಸಿಲ್ಲ. ಗೊತ್ತುಗುರಿ ಇಲ್ಲದೆ ಹೋಗುತ್ತಿದ್ದ. ಕಲಿಕೆಯಲ್ಲಿ ದಿಗಂತ್‌ ಹುಷಾರಿದ್ದ. ಆದರೆ ಪರೀಕ್ಷೆ ಕಾರಣಕ್ಕೆ ಕೆಲವು ದಿನಗಳಿಂದ ಚಿಂತಾಕ್ರಾಂತನಾಗಿದ್ದ. ಅದೇ ಕಾರಣದಲ್ಲಿ ಆತ ಮನೆಯಿಂದ ಹೊರಗೆ ಹೋಗಿದ್ದಾನೆ.

ದಿಗಂತ್‌ ನಾಪತ್ತೆ ಪ್ರಕರಣದಲ್ಲಿ ಪೊಲೀಸರಿಂದ ಯಾವುದೇ ವಿಳಂಬ ಆಗಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಪತ್ತೆಕಾರ್ಯ ನಡೆಸಲಾಗಿದೆ. ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಕೆ ಬಳಿಕ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಕೊನೆಗೂ ಆತ ಪತ್ತೆಯಾದುದು ಸಮಾಧಾನ ತಂದಿದೆ.

-ಯತೀಶ್‌, ಎಸ್ಪಿ, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ