ಕಾರವಾರ: ಮುಂಬಯಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ‘ಡಿಜಿಟಲ್ ಅರೆಸ್ಟ್’ ಮಾಡುವ ಬೆದರಿಕೆ ಹಾಕಿದ ವಂಚಕರು, ಎಲ್.ಐ.ಸಿ. ಏಜೆಂಟ್ ಹಾಗೂ ರೈತರೊಬ್ಬರಿಗೆ ಬರೋಬ್ಬರಿ ₹1.74 ಕೋಟಿ ವಂಚಿಸಿದ್ದಾರೆ.
ಏ. 21ರಂದು ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿಯು ತಾನು ಮುಂಬಯಿ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾನೆ. "ನಿಮ್ಮ ಆಧಾರ್ ಕಾರ್ಡ್ ಬಳಸಿ ಭಯೋತ್ಪಾದಕರು ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಕೋಟ್ಯಂತರ ರುಪಾಯಿ ಮನಿ ಲಾಂಡ್ರಿಂಗ್ ಅವ್ಯವಹಾರ ನಡೆಸಿದ್ದಾರೆ. ನಿಮ್ಮ ಹೆಸರಲ್ಲಿ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಎಫ್.ಐ.ಆರ್. ದಾಖಲಾಗಿದೆ ಎಂದು ಬೆದರಿಸಿದ್ದಾನೆ.
ಹೆದರಿದ ಶಿವಾನಂದ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ನಕಲಿ ಎ.ಟಿ.ಎಂ. ಕಾರ್ಡ್ ಫೋಟೋ ಕಳುಹಿಸಿದ ವಂಚಕರು, ಅವರನ್ನು ಕೂಡಲೇ ಅರೆಸ್ಟ್ ಮಾಡುವುದಾಗಿ ಬೆದರಿಸಿದ್ದಾರೆ. ಆನಂತರ ಮುಂಬೈ ಪೊಲೀಸರ ಸಮವಸ್ತ್ರ ಧರಿಸಿದ್ದ ವ್ಯಕ್ತಿಗಳು ಐಪಿಎಸ್ ಮತ್ತು ಡಿಐಜಿ ದರ್ಜೆಯ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿದ್ದಾರೆ. "ನಾವು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ರಿಸರ್ವ್ ಬ್ಯಾಂಕ್‌ಗೆ ಜಮಾ ಮಾಡಬೇಕು. ನೀವು ನಿರ್ದೋಷಿ ಎಂದು ಕಂಡುಬಂದರೆ ಹಣವನ್ನು ಮರಳಿ ನೀಡುತ್ತೇವೆ ಎಂದು ನಂಬಿಸಿದ್ದಾರೆ.ಈ ವಿಷಯವನ್ನು ಯಾರಲ್ಲಿಯೂ ಹೇಳಬಾರದು, ಹೇಳಿದರೆ ತಕ್ಷಣ ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದ ವಂಚಕರು, ಅಲ್ಲಿಯವರೆಗೂ ಪ್ರತಿ ದಿನ ಲೊಕೇಶನ್ ಮತ್ತು ಫೋಟೋವನ್ನು ವಾಟ್ಸ್‌ಆ್ಯಪ್ ಮಾಡುವಂತೆ ಸೂಚಿಸಿದ್ದರು. ನಿಜವಾದ ಪೊಲೀಸರೇ ಕರೆ ಮಾಡಿದ್ದಾರೆ ಎಂದು ನಂಬಿದ ಶಿವಾನಂದ ಅವರು, ತಮ್ಮ ಫಿಕ್ಸೆಡ್ ಡಿಪಾಸಿಟ್ ಹಣವನ್ನೆಲ್ಲಾ ಬಿಡಿಸಿ, ಏ. 21ರಿಂದ 24ರ ಅವಧಿಯಲ್ಲಿ ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಒಟ್ಟು ₹1,74,50,000 ವರ್ಗಾಯಿಸಿದ್ದಾರೆ.