ಹುಲಿಗೆಮ್ಮ ಜಾತ್ರೋತ್ಸವದಲ್ಲಿ ಡಿಜಿಟಲ್ ವ್ಯವಸ್ಥೆ: ಹಿಟ್ನಾಳ

KannadaprabhaNewsNetwork |  
Published : May 02, 2025, 11:46 PM IST
2ಕೆಪಿಎಲ್24 ಕೊಪ್ಪಳ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅವರು ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರಿಂದ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಸಮಿತಿ ರಚಿಸಿದ್ದು ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಬಾರಿ ಶುಚಿತ್ವ ಕಾಪಾಡಲು ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ.

ಕೊಪ್ಪಳ:

ಹುಲಗಿಯ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಡಿಜಿಟಲ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ರೆಗೆ ಡಿಜಿಟಲ್ ರೂಪ ಕೊಟ್ಟಿದ್ದು ಪಾರ್ಕಿಂಗ್, ಆಸ್ಪತ್ರೆ ಸೌಕರ್ಯ, ಪ್ರಸಾದ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಭಕ್ತರಿಗೆ ತಿಳಿಸಲು ಡಿಜಿಟಲ್‌ನಡಿ ಕ್ಯೂಆರ್ ಕೋಡ್ ಸಿದ್ಧಪಡಿಸಲಾಗಿದೆ ಎಂದರು.

ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರಿಂದ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಸಮಿತಿ ರಚಿಸಿದ್ದು ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಬಾರಿ ಶುಚಿತ್ವ ಕಾಪಾಡಲು ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಪಾರ್ಕಿಂಗ್, ಪೂಜಾ ಕಾರ್ಯ ಸೇರಿ ಬುಕಿಂಗ್ ವ್ಯವಸ್ಥೆಯನ್ನು ಡಿಜಿಟಲ್ ರೂಪಕ್ಕೆ ತರಲಾಗಿದೆ. ತಾಂತ್ರಿಕ ತಂಡ ಕ್ಯೂಆರ್ ಕೋಡ್ ಸಿದ್ಧಪಡಿಸಲಿದೆ. ಪೂಜಾ ಕಾರ್ಯ ನೇರ ವೀಕ್ಷಣೆಗೆ ಎಲ್‌ಇಡಿ ವಾಲ್ ಪರದೆ ಹಾಕಲಾಗುವುದು. ಪ್ರಸಾದ ನಿಲಯ ಹಾಗೂ ಹೊರ ಭಾಗದಲ್ಲಿ ವಿವಿಧ ಕೌಂಟರ್‌ ಸ್ಥಾಪಿಸಿ ಒಂದು ತಿಂಗಳು ಪ್ರಸಾದ ವ್ಯವಸ್ಥೆ ಮಾಡಲಿದ್ದೇವೆ. ಭಕ್ತರು ದಾಸೋಹಕ್ಕೆ ರೊಟ್ಟಿ, ಮಾದಲಿ, ಸಿಹಿ ಪದಾರ್ಥ ಸೇರಿದಂತೆ ಇತರೆ ಧವಸ-ಧಾನ್ಯವನ್ನು ದೇವಸ್ಥಾನ ಆಡಳಿತ ಮಂಡಳಿಗೆ ತಂದು ಕೊಡಬಹುದು ಎಂದರು.

ಭಕ್ತರಿಗೆ ದೇವಸ್ಥಾನದ ಬಲ ಹಾಗೂ ಎಡ ಭಾಗದ ರಸ್ತೆಗಳಿಂದ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿದೆ. ಖಾಸಗಿ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 40ಕ್ಕೂ ಹೆಚ್ಚು ವಿಶೇಷ ಬಸ್‌ಗಳು ಸಂಚರಿಸಲಿವೆ. ದೇವಸ್ಥಾನಕ್ಕೆ ಕೊಪ್ಪಳ, ಹಿಟ್ನಾಳ, ಗಂಗಾವತಿ ಭಾಗದಿಂದ ಬರುವ ಭಕ್ತರಿಗೆ ಮೂರು ಮಾರ್ಗದಲ್ಲಿ ಸ್ನಾನಕ್ಕೆ ಹಾಗೂ ಶೌಚಾಲಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮೆರಾ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ಒದಗಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶರಾವ್, ಮುಖಂಡರಾದ ವೆಂಕಟೇಶ ವಡ್ಡರ್, ಈರಣ್ಣ ಈಳಗೇರ, ಪಾಲಾಕ್ಷಪ್ಪ ಗುಂಗಾಡಿ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್