ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ । ಜಿಲ್ಲೆಯಲ್ಲಿ ಫವತಿ ಖಾತೆ ಆಂದೋಲನಕ್ಕೆ ಕ್ರಮ । ಮುಕ್ತ ಅಭಿಯಾನಕ್ಕೆ ನಿರ್ದಿಷ್ಟ ಕಾಲಮಿತಿ
ಬಹು ಮಾಲಿಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲಿಕತ್ವ ವನ್ನು ವಾರಸುದಾರರಿಗೆ ಮಾಡಿಕೊಡುವ ಫವತಿ ಖಾತೆ ಆಂದೋಲನಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕಾರ್ಯರೂಪಕ್ಕೆ ತಂದು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಜಮೀನುಗಳ ಸರ್ವೆ ಕಾರ್ಯ ಮುಗಿಸಿ ಶೇಕಡ 98ರಷ್ಟು ಸರ್ಕಾರಿ ಜಮೀನು ಗುರ್ತಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಒಂದೇ ಪಹಣಿಯಲ್ಲಿನ ಖಾತೆಗಳನ್ನು ಪೋಡಿ ಮಾಡಲು, ಖಾಸಗಿ ಜಂಟಿ ಮಾಲಿಕತ್ವ ದ ಖಾತೆಗಳನ್ನು ಪೋಡಿ ಮಾಡಲು ಜಿಲ್ಲೆಯಾದ್ಯಂತ ಸರ್ವೇ ಕಾರ್ಯ ನಡೆಯುತ್ತಿದೆ. ಅಂದಾಜು 45,000 ಬಹುಮಾಲಿಕತ್ವದ ಪಹಣಿಗಳು ಬಾಕಿ ಇದ್ದು ಹಂತ ಹಂತವಾಗಿ ಸರ್ವೆ ಕಾರ್ಯ ಮುಗಿಸಿ ಪೋಡಿ ಮಾಡುವಂತೆ ತಿಳಿಸಿದರು.
ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯ ಶೀಘ್ರವಾಗಿ ಆಗಬೇಕು. ಸ್ಮಶಾನ ಹಾಗೂ ಕೆರೆ ಒತ್ತುವರಿ ತೆರವು ತ್ವರಿತವಾಗಿ ಪೂರ್ಣಗೊಳಿಸಿ. ಸ್ಮಶಾನ ಜಾಗವನ್ನು ಸರ್ವೆ ಕಾರ್ಯ ಮಾಡಿಸಿದ ನಂತರ ನರೇಗಾ ಯೋಜನೆ ಮುಖಾಂತರ ಕಾಂಪೌಂಡ್ ನಿರ್ಮಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗೆ ಒಪ್ಪಿಸಿ , ಗ್ರಾಮ ಪಂಚಾಯಿತಿ ಸ್ವತ್ತು ಎಂದು ನಾಮಫಲಕ ಅಳವಡಿಸಿ ಎಂದರು.
ತಂತ್ರಜ್ಞಾನವನ್ನು ಬಳಸಿ ಇ-ಆಫೀಸ್, ಇ- ಗೌರ್ನೆಸ್ ಮೂಲಕ ಕಂದಾಯ ಇಲಾಖೆಯಡಿ ಬರುವ ಎಲ್ಲಾ ಕಾರ್ಯಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಇದರಿಂದ ಕೆಲಸದ ಒತ್ತಡ ಸರಳೀಕರಣ ವಾಗಲಿದೆ. ಮುಂದುವರೆದು ಎಲ್ಲಾ ಜಮೀನುಗಳ ದಾಖಲೆಗಳು ಆನ್ಲೈನ್ ಲ್ಲಿ ಸಿಗುವಂತೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1993 ಸರ್ವೆ ನಂಬರ್ ಗಳ ಪೈಕಿ 589 ಸರ್ವೆ ನಂಬರ್ ಗಳು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಇರುವ 1404 ಸರ್ವೆ ನಂಬರ್ ಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 7,29,567 ಜಮೀನು ಮಾಲೀಕರರು ಆಧಾರ್ ಜೋಡಣೆ ಮಾಡಬೇಕಿದೆ, ಇದುವರೆಗೂ 2,94,856 ಜಮೀನು ಮಾಲೀಕರು ಪಹಣಿಗೆ ಆಧಾರ್ ಜೋಡಣೆ ಮಾಡಿಸಿದ್ದಾರೆ. 82,264 ಜಮೀನುಗಳು ಮರಣ ಹೊಂದಿದವರ ಹೆಸರಿನಲ್ಲೇ ಇವೆ. ಶೇಕಡ 79.88 ರಷ್ಟು ಆಧಾರ್ ಜೋಡಣೆ ಪ್ರಗತಿ ಸಾಧಿಸಲಾಗಿದೆ. ನ್ಯಾಯಾಂಗ ವ್ಯಾಜ್ಯದಲ್ಲಿರುವ ಜಮೀನುಗಳು ಮಾತ್ರ ಬಿಟ್ಟು, ಉಳಿದೆಲ್ಲ ಜಮೀನುಗಳ ಕುಟುಂಬದವರ ಸಂಪರ್ಕ ಸಾಧಿಸಿ ಜಂಟಿಯಾಗಿ (ಇ-ಖಾತೆಯನ್ನು) ಹೆಸರು ನೋಂದಣಿ ಕಡ್ಡಾಯವಾಗಿ ಮಾಡಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರತರಾಗಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಅರಿತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರ ನಿರೀಕ್ಷೆಯನ್ನು ಹುಸಿಗೊಳಿಸದೇ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಪರಿಹಾರ ಒದಗಿಸುವಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರಬೇಕು ಎಂದು ಹೇಳಿದರು.
ಕೃಷ್ಣ ಬೈರೇಗೌಡ, ಕಂದಾಯ ಸಚಿವ.