ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ

KannadaprabhaNewsNetwork | Published : Jan 19, 2025 2:16 AM

ಸಾರಾಂಶ

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದೆ.

ಕೂಡ್ಲಿಗಿ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆಯ ಹಳೆಯ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ತಹಸೀಲ್ದಾರ್ ಎಂ.ರೇಣುಕಾ ಹಾಗೂ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಪೈಕಿ ಪಂಚ ಗ್ಯಾರಂಟಿ ಯೋಜನೆಗಳೇ ಸಾಕ್ಷಿಯಾಗಿವೆ. ಇದೀಗ, ಕಂದಾಯ ಇಲಾಖೆಯಲ್ಲಿ ಹಳೆಯ ಭೂ ದಾಖಲೆಗಳು ಡಿಜಿಟಲೀಕರಣಗೊಳ್ಳುವುದು ಉತ್ತಮ ಕಾರ್ಯವಾಗಿದೆ. ಅದರಂತೆ, ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ ಪಟ್ಟಣ ಸೇರಿ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲೂ ಶಾಲೆ, ಕಾಲೇಜು, ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಲ್ಲದೆ, ಮಾದರಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಶಾಸಕರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿ, ಕಂದಾಯ ಇಲಾಖೆಯ ಅಭಿಲೇಖಾಲಯದಲ್ಲಿ ಹಳೆಯ ಭೂ ದಾಖಲೆಗಳ ಸಂರಕ್ಷಣೆಗಾಗಿ ಡಿಜಿಟಲೀಕರಣವಾಗುತ್ತಿದೆ. ನಮ್ಮ ತಾಲೂಕಿನ ಎಲ್ಲ ದಾಖಲೆಗಳನ್ನು ಸ್ಕಾನ್ ಮಾಡುವಂಥ ಕಾರ್ಯಕ್ಕೆ ಶಾಸಕರು ಹೆಚ್ಚಿನ ಒತ್ತು ನೀಡಿದ್ದರಿಂದ ನಮ್ಮಲ್ಲಿ ಸಾಧ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಕೂಡ್ಲಿಗಿ ಪಪಂ ಮಾಜಿ ಅಧ್ಯಕ್ಷ ಉದಯ ಎಸ್.ಜನ್ನು, ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಎಂಜಿನಿಯರ್ ಶಫಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿಜಯಕುಮಾರ್, ಶಿರಸ್ತೇದಾರ್ ಮಹಮ್ಮದ್ ಗೌಸ್, ಚಂದ್ರಶೇಖರ್, ಕಂದಾಯ ನಿರೀಕ್ಷಕರಾದ ಕೂಡ್ಲಿಗಿ ಕುಮಾರಸ್ವಾಮಿ, ಗುಡೇಕೋಟೆ ಚೌಡಪ್ಪ, ಕಾನಹೊಸಹಳ್ಳಿ ಸಿದ್ದಪ್ಪ, ಪ್ರಥಮದರ್ಜೆ ಸಹಾಯಕರಾದ ಶಾಂತಕುಮಾರ್, ಮುರಳಿಕೃಷ್ಣ, ಸುರೇಶ್, ಸವಿತಾ, ಎಸ್‌ಡಿಎ ಶಿವಕುಮಾರ ಗೌಡ, ಪ್ರಸನ್ನಕುಮಾರ್ ಸೇರಿ ಗ್ರಾಮ ಆಡಳಿತಾಧಿಕಾರಿಗಳು, ಸಿಬ್ಬಂದಿ ಇದ್ದರು.

ಸಿಂಗಾರಗೊಂಡ ಅಭಿಲೇಖಾಲಯ:

ಕೂಡ್ಲಿಗಿ ತಾಲೂಕಿನ ಹಳೆಯ ಭೂ ದಾಖಲೆಗಳ ಡಿಜಿಟಲೀಕರಣ ಚಾಲನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಭಿಲೇಖಾಲಯವನ್ನು ಹೂವು, ತೋರಣಗಳಿಂದ ಸಿಂಗರಿಸಿದ್ದಲ್ಲರು. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಂಪ್ರದಾಯಕ ಉಡುಗೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Share this article