ಮಾರುತಿ ಶಿಡ್ಲಾಪುರ
ಕಂದಾಯ ಇಲಾಖೆಯಲ್ಲಿ ಒಂದು ಸಣ್ಣ ದಾಖಲೆಗೆ ವಾರಗಟ್ಟಲೆ ಅಲೆದಾಟಕ್ಕೆ ಈಗ ಬ್ರೇಕ್ ಬಿದ್ದಿದ್ದು, ತಾಲೂಕು ಆಡಳಿತ ಬೆರಳ ತುದಿಯಲ್ಲೇ ಎಲ್ಲ ಕಂದಾಯ ದಾಖಲೆಗಳನ್ನು ದೊರಕುವಂತೆ ಮಾಡಿದೆ.
ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಸುರಕ್ಷಿತಗೊಳಿಸಲು, ಸುಳ್ಳು ದಾಖಲೆ ಸೃಷ್ಟಿ ತಡೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭೂಸುರಕ್ಷಾ ಯೋಜನೆಯಡಿ ತಾಲೂಕಿನಲ್ಲಿ 40 ಲಕ್ಷ ಪುಟ ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಸುಲಭ ಸೇವೆಗಾಗಿ ಕಂದಾಯ ದಾಖಲೆಗಳನ್ನೆಲ್ಲ ಡಿಜಿಟಲೀಕರಣಗೊಳಿಸಿದ ಜಿಲ್ಲೆಯ ಮೊದಲ ತಾಲೂಕು ಎನ್ನುವ ಹಿರಿಮೆಗೆ ಹಾನಗಲ್ಲ ಪಾತ್ರವಾಗಿದೆ.ಕಂದಾಯ ದಾಖಲೆ ಪಡೆಯಲು ಈ ಮೊದಲು ತಹಸೀಲ್ದಾರ್ ಮತ್ತು ನಾಡಕಚೇರಿಗಳಿಗೆ ಅರ್ಜಿ ಸಲ್ಲಿಸಿ, ತಿಂಗಳುಗಳ ಕಾಲ ಅಲೆಯಬೇಕಿತ್ತು. ಕೆಲವು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ದಾಖಲೆಗಳು ಲಭಿಸದೇ ಸೌಲಭ್ಯಗಳಿಂದ ವಂಚಿತರಾಗಬೇಕಿತ್ತು. ಇದಕ್ಕೆಲ್ಲ ಫುಲ್ ಸ್ಟಾಪ್ ಬಿದ್ದಿದ್ದು, ನೂರಾರು ವರ್ಷಗಳ ದಾಖಲೆಗಳು ತಕ್ಷಣವೇ ಲಭ್ಯವಾಗುವಂತಾಗಿರುವುದು ವಿಶೇಷ.
ಡ ಕೈಬರಹ, ಕೈ ಬರಹದ ಪಹಣಿ, 1930-2000 ಅವಧಿಯ ಭೂ ಸುಧಾರಣಾ ಹಾಗೂ ಭೂ ಮಂಜೂರಾತಿ ಕಡತಗಳು, ಡ ವರದಿ, ಎಂ.ಆರ್. ವರದಿ, ವೇತನ ಫೈಲ್‌ಗಳು, ಆರ್‌ಟಿಎಸ್ ತಿದ್ದುಪಡಿ ಹೀಗೆ ಹತ್ತು, ಹಲವು ದಾಖಲೆಗಳೆಲ್ಲ ಡಿಜಿಟಲೀಕರಣಗೊಂಡು ಸುರಕ್ಷಿತವಾಗಿವೆ. ಕಳೆದ ಜೂನ್ ತಿಂಗಳಿನಿಂದ ಜನರಿಗೆ ಡಿಜಿಟಲೀಕರಣಗೊಂಡ ದಾಖಲೆಗಳನ್ನು ಒದಗಿಸಲಾಗುತ್ತಿದ್ದು, ಇದುವರೆಗೆ 10 ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ಸಾರ್ವಜನಿಕರಿಗೆ ಪೂರೈಸಲಾಗಿದೆ. ಇದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು.
ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿ ಮತ್ತು ಸುಳ್ಳು ದಾಖಲೆಗಳನ್ನು ತಡೆಯಲು ಡಿಜಿಟಲೀಕರಣ ಮಹತ್ವದ ಹೆಜ್ಜೆಯಾಗಿದೆ. ಅಲ್ಲದೇ ಸಾರ್ವಜನಿಕರಿಗೆ ತಮ್ಮ ಭೂ ದಾಖಲಾತಿಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಿದೆ. ತಾಲೂಕಿನಲ್ಲಿ ಎಲ್ಲ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಶಾಶ್ವತವಾಗಿ ಸಂರಕ್ಷಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಕಂದಾಯ ದಾಖಲೆಗಳ ಡಿಜಿಟಲೀಕರಣದಿಂದ ತುಂಬಾ ಅನುಕೂಲವಾಗಿದೆ. ಕೆಲವು ಬಾರಿ ಅರ್ಜಿ ಸಲ್ಲಿಸಿದರೂ ಸಹ ದಾಖಲೆಗಳು ಸಿಗಲು ವಿಳಂಬ ಆಗುತ್ತಿತ್ತು. ಇದೀಗ ಆನ್‌ಲೈನ್‌ನಲ್ಲಿಯೇ ಲಭಿಸುತ್ತಿರುವುದರಿಂದ ಸಹಕಾರಿಯಾಗಿದೆ. ಅಲ್ಲದೇ ನಮ್ಮ ದಾಖಲೆಗಳು ಸುರಕ್ಷಿತವಾಗಿರುವುದರಿಂದ ಚಿಂತೆ ಇಲ್ಲದಂತಾಗಿದೆ ಎಂದು ಮಹಾರಾಜಪೇಟೆ ಗ್ರಾಮಸ್ಥ ಫಕ್ಕೀರಪ್ಪ ಹೇಳಿದರು.