ಹುಬ್ಬಳ್ಳಿ: ಏಜೆಂಟರ ಹಾವಳಿ ತಪ್ಪಿಸಲು ತಹಸೀಲ್ದಾರ್ ಹಾಗೂ ಸಬ್ ರಜಿಸ್ಟ್ರಾರ ಕಚೇರಿಗಳ ಎಲ್ಲ ದಾಖಲೆಗಳನ್ನು ಶೀಘ್ರವೇ ಡಿಜಿಟಲೀಕರಣ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬೆಳಗಾವಿಗೆ ತೆರಳುವ ಮುನ್ನ ಬುಧವಾರ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ದಾಖಲೆ, ಕೆಲಸಗಳನ್ನೆಲ್ಲ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲೆಲ್ಲಿ ಏಜೆಂಟರ ಹಾವಳಿ ಇದೆ ಎನ್ನುವುದರ ಬಗ್ಗೆ ಸರಕಾರ ಪರಿಶೀಲನೆ ಮಾಡುತ್ತಿದೆ. ಏಕೆಂದರೆ, ನಾವೇ ನಿಂತು ಏಜೆಂಟರ ಹಾವಳಿ ತಪ್ಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅವರಿಗೆ ಕೆಲಸವೇ ಇಲ್ಲದಂತೆ ಎಲ್ಲ ದಾಖಲೆಗಳನ್ನು ಡಿಜಟಲೀಕರಣ ಮಾಡುತ್ತಿದ್ದೇವೆ ಎಂದರು.ಯಾವ ಯಾವ ಅಧಿಕಾರಿಗಳ ಹತ್ತಿರ ಕಡತ ಎಷ್ಟು ದಿನ ಇವೆ ಎನ್ನುವುದನ್ನು ತಹಸೀಲ್ದಾರ್‌ಗೆ ತಿಳಿಯುವಂತೆ ಮಾಡಲಾಗಿದೆ. ಇದರಿಂದ ಎಲ್ಲ ಕಡತಗಳು ಆನ್‌ಲೈನ್ ಮೂಲಕವೇ ವಿಲೇವಾರಿ ಆಗುತ್ತಿರುವುದರಿಂದ ಮೊದಲಿನಂತೆ ಯಾವುದೇ ದಾಖಲೆ ಪಡೆಯಲು ವಿಳಂಬವಾಗುವುದಿಲ್ಲ ಎಂದು ಹೇಳಿದರು.
ಭೂ ಸುರಕ್ಷಾ ಕಾರ್ಯಕ್ರಮವನ್ನು 31 ಜಿಲ್ಲೆಯ ಒಂದೊಂದು ತಾಲೂಕಿಗೆ ಕೊಡಲಾಗುತ್ತದೆ. ಅದು ಹುಬ್ಬಳ್ಳಿಯಲ್ಲಿ ಒಂದೆರಡು ದಿನಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದರು.
ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಸೇರಿದಂತೆ ಇತರರು ಹಾಜರಿದ್ದರು.
ಸರ್ವೆ ಇಲಾಖೆಯಲ್ಲಿ 596 ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ 357 ಸರ್ವೇ ಎಡಿಎಲ್‌ಆರ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಅರ್ಜಿ ಕರೆಯಲಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ರಾಜ್ಯದಲ್ಲಿ ಸರ್ವೇ ಕೆಲಸದ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಬಾಕಿ ಇವೆ. ಅವುಗಳನ್ನು ವಿಲೇವಾರಿ ಮಾಡುವುದಕ್ಕಾಗಿ 750 ಸವೇರ್ಧಾರರಿಗೆ ಪರವಾನಗಿ ನೀಡುತ್ತಿದ್ದೇವೆ. ಒಟ್ಟಿನಲ್ಲಿ ಸರ್ವೇ ಇಲಾಖೆ ಬಲಿಷ್ಠಗೊಳಿಸಲು ಸಿಬ್ಬಂದಿ ನೇಮಕ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.