ಸೊರಗಿದ ದಾಂಡೇಲಿಯ ಮೊಸಳೆ ಪಾರ್ಕ್‌

KannadaprabhaNewsNetwork |  
Published : Dec 30, 2024, 01:00 AM IST
ಎಚ್೨೯.೧೨-ಡಿಎನ್‌ಡಿ೧ : ಮೊಸಳೆ ಪಾರ್ಕ ಸಂಬಂಧಿಸಿದ ಮೂರು ಚಿತ್ರಗಳನ್ನು ಲಗತ್ತಿಸಿದ್ದೇವೆ. | Kannada Prabha

ಸಾರಾಂಶ

ಜೋಯಿಡಾ, ದಾಂಡೇಲಿ ಭಾಗ ಪ್ರವಾಸಿ ತಾಣವಾಗಿ ಬೆಳೆಯುತ್ತಿದ್ದು, ಆ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ತಾಣವಾಗಿ ಬೆಳೆಯಬೇಕಿದ್ದ ಮೊಸಳೆ ಪಾರ್ಕ್ ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದೆ.

ಗುರುಶಾಂತ ಜಡೆಹಿರೇಮಠ

ದಾಂಡೇಲಿ: ಜೋಯಿಡಾ, ದಾಂಡೇಲಿ ಭಾಗ ಪ್ರವಾಸಿ ತಾಣವಾಗಿ ಬೆಳೆಯುತ್ತಿದ್ದು, ಆ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ತಾಣವಾಗಿ ಬೆಳೆಯಬೇಕಿದ್ದ ಮೊಸಳೆ ಪಾರ್ಕ್ ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದೆ. ದಾಂಡೇಲಿಯ ಹಳಿಯಾಳ ರಸ್ತೆಗೆ ಬರುವ ಹಾಳಮಡ್ಡಿ ಸಮೀಪ ಕಾಳಿ ನದಿಯ ತಟದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಎರಡು ವರ್ಷಗಳ ಹಿಂದೆ ಉದ್ಘಾಟನೆಗೊಂಡು, ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮುಕ್ತವಾಗಿದೆ. ನೂರಾರು ಮೊಸಳೆಗಳು ಈ ಪಾರ್ಕ್‌ನಲ್ಲಿ ಕಾಣಸಿಗುತ್ತವೆ.

ಅಕ್ಟೋಬರ್ ಮೊದಲ ವಾರದಿಂದ ಆರಂಭಗೊಳ್ಳುವ ಪ್ರವಾಸೋದ್ಯಮ ಚಟುವಟಿಕೆ ಡಿಸೆಂಬರ್, ಜನವರಿ ತಿಂಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ದಾಂಡೇಲಿಗೆ ಹರಿದು ಬರುತ್ತಾರೆ. ಪ್ರವಾಸಕ್ಕೆ ಬರುವ ಪ್ರವಾಸಿಗರ ಪಟ್ಟಿಯಲ್ಲಿ ಮೊಸಳೆ ಪಾರ್ಕ್‌ ಕೂಡ ಒಂದಾಗಿದೆ.

ಮೊಸಳೆ ಪಾರ್ಕ್ ಪಕ್ಕದಲ್ಲಿ ನಿರ್ಮಿಸಿರುವ ಸುಂದರ ಉದ್ಯಾನದಲ್ಲಿ ನಿರ್ವಹಣೆ ಕೊರತೆಯಿಂದಾಗಿ ಎತ್ತರಕ್ಕೆ ಹುಲ್ಲು ಬೆಳೆದಿದೆ. ಪಾರ್ಕಿನ ಒಳಗಿರುವ ಮೊಸಳೆ, ಜಿರಾಫೆ, ಜಿಂಕೆ ಪ್ರತಿಕೃತಿಗಳ ಬಣ್ಣ ಮಾಸಿದೆ. ಮೊಸಳೆ ವೀಕ್ಷಣೆಯ ಗೋಪುರ ಅಲ್ಲಿಲ್ಲಿ ತುಕ್ಕು ಹಿಡಿದಿದೆ. ಇನ್ನು ಮೊಸಳೆಯ ಜೀವನ ಶೈಲಿ ವಿವರವಾಗಿ ತಿಳಿಸಲು ಪಾರ್ಕ್‌ನಲ್ಲಿ ಯಾವುದೇ ಗೈಡ್ ಇಲ್ಲದಿರುವುದು ಹಾಗೂ ಪ್ರವಾಸಿಗರಿಗೆ ಮೊಸಳೆ ಜೀವನದ ಕ್ರಮದ ಕುರಿತು ಮಾಹಿತಿ ಫಲಕ ಇಲ್ಲದಿರುವುದು ದೊಡ್ಡ ಕೊರತೆಯಾಗಿ ತೋರುತ್ತದೆ.

ಕಳೆದ ಮಾರ್ಚ್‌ನಲ್ಲಿ ಮೊಸಳೆ ಪಾರ್ಕ್‌ ನಿರ್ವಹಣೆ ಮತ್ತು ಶುಲ್ಕ ಸಂಗ್ರಹಣೆಯ ಟೆಂಡರ್ ಮುಗಿದಿದ್ದು, ಪ್ರವಾಸೋದ್ಯಮ ಇಲಾಖೆ ಮತ್ತೆ ಟೆಂಡರ್ ಕರೆಯಲು ವಿಳಂಬ ಮಾಡುತ್ತಿದೆ. ಮೊಸಳೆ ಪಾರ್ಕ್ ನಿರ್ವಹಣೆ ಮತ್ತು ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಟೆಂಡರ್ ಕರೆದು ಗುತ್ತಿಗೆ ನೀಡುತ್ತಿತ್ತು. ಆದರೆ, ಕಳೆದ ಮಾರ್ಚ್‌ನಿಂದ ಪಾರ್ಕ್ ನಿರ್ವಹಣೆ ಮಾಡಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮುಂದೆ ಬಂದಿಲ್ಲ ಎಂಬುದು ಸ್ಥಳೀಯರು ಆರೋಪವಾಗಿದೆ.

ಮಕ್ಕಳಿಗೆ ₹೨೦ ದೊಡ್ಡವರಿಗೆ ₹೫೦ ಶುಲ್ಕವನ್ನು ಆಕರಣೆ ಮಾಡಲಾಗುತ್ತಿದ್ದು, ಒಳ ಹೋದ ಪ್ರವಾಸಿಗರಿಗೆ ಮೊಸಳೆ ಕುರಿತು ಸರಿಯಾದ ಮಾಹಿತಿ ಹಾಗೂ ವಿವರಣೆ ಸಿಗುತ್ತಿಲ್ಲ. ಪಾರ್ಕ್‌ನಲ್ಲಿ ಮೊಸಳೆ ಕಂಡರೆ ಅದೃಷ್ಟವಾಗಿದೆ. ₹೫೦ ನೀಡಿದ್ದು ವ್ಯರ್ಥವಾಯಿತು ಎನ್ನುತ್ತಾರೆ ಪ್ರವಾಸಿಗರು.

ಮೊಸಳೆ ನೋಡಲು ಬೇಕಿದೆ ಬೈನಾಕ್ಯುಲರ್

ಕಾಳಿ ನದಿಯಲ್ಲಿ ಮೊಸಳೆಗಳು ಬರಿಗಣ್ಣಿಗೆ ಕಾಣಿಸುವುದು ಕಷ್ಟವಾಗಿದೆ. ಹೀಗಾಗಿ, ನೋಡಲು ಬೈನಾಕ್ಯುಲಾರ್‌ ಇದ್ದರೆ ಒಳ್ಳೆಯದು ಎನ್ನುತ್ತಾರೆ ಹಾವೇರಿಯ ಪ್ರವಾಸಿಗ ಪ್ರಭಾಸ್.

ನಿರ್ವಹಣೆ ಕೊರತೆಯಿಂದ ಪಾರ್ಕಿನಲ್ಲಿ ನಿರ್ಮಿಸಲಾಗಿರುವ ಕುಳಿತುಕೊಳ್ಳುವ ಆಸನ, ಜಿರಾಫೆ, ಮೊಸಳೆ ಮುಂತಾದ ಪ್ರಾಣಿಗಳು ಬಣ್ಣ ಕಳೆದುಕೊಂಡಿವೆ. ಅಲಂಕಾರಿ ಗಿಡಗಳು ನಿರ್ವಹಣೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಬೆಳೆದು ಪಾರ್ಕಿನ ಅಂದವನ್ನು ಹಾಳು ಮಾಡಿವೆ. ಪಾರ್ಕ್ ನಿರ್ವಹಣೆಗೆ ಪಕ್ಕದಲ್ಲಿ ನದಿ ಇದ್ದರೂ ನೀರಿನ ಕೊರತೆ ಇದೆ.

ಪಾರ್ಕಿನ ವೀಕ್ಷಣಾ ಗೋಪುರದ ರಕ್ಷಣಾ ಗೋಡೆಗಳ ಮೇಲೆ ಮೊಸಳೆ ಜೀವನ ಕ್ರಮ, ಆಹಾರ ಕ್ರಮ, ಸಂತಾನೋತ್ಪತ್ತಿ, ವಾಸಸ್ಥಳದ ಭೌಗೋಳಿಕ ಪರಿಸರ ಕುರಿತು ಸಮಗ್ರ ಮಾಹಿತಿ ಒಳಗೊಂಡ ಫಲಕವನ್ನು ಇಲ್ಲವೇ ಎಲ್‌ಇಡಿ ಪರದೆ ಅಳವಡಿಸಬೇಕು, ಮೊಸಳೆ ಜೀವನ, ಪ್ರಜಾತಿ, ವಾಸ ಸ್ಥಾನ, ಸಂತತಿ, ಜೀವನ ಕ್ರಮ ಮನುಷ್ಯರ-ಪ್ರಾಣಿಗಳ ಸಂಘರ್ಷದ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ಮುಗಿದ ಅವಧಿ

ಮೊಸಳೆ ಪಾರ್ಕಿನ ಗುತ್ತಿಗೆ ಅವಧಿ ಮುಗಿದಿದ್ದು, ಶುಲ್ಕ ಆಕರಣೆ ಮತ್ತು ಪಾರ್ಕ್ ನಿರ್ವಹಣೆಗೆ ಸಂಬಂಧಿಸಿದಂತೆ ಇನ್ನೇನು ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯಲಾಗುವುದು. ಈಗ ತಾತ್ಕಾಲಿಕವಾಗಿ ಸ್ಥಳೀಯರು ಪಾರ್ಕ್ ನಿರ್ವಹಣೆ ಮಾಡುತ್ತಿದ್ದಾರೆ.

ಜಯಂತ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ