ಬ್ರಹ್ಮಾವರ: ಇಲ್ಲಿನ ಚಾಂತಾರು ಗ್ರಾಮದ ಹೆರಂಜೆಯಲ್ಲಿ ತೆಂಗಿನಕಾಯಿ ಬಿದ್ದು ಮೃತಪಟ್ಟ 1.5 ವರ್ಷದ ಮಗು ದಕ್ಷ್ ಮನೆಗೆ ಶಾಸಕ ಯಶ್‌ಪಾಲ್ ಸುವರ್ಣ ಅವರು ಕಂದಾಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.ಘಟನೆ ಬಗ್ಗೆ ಮಾಹಿತಿ ಪಡೆದ ಶಾಸಕರು, ಘಟನೆ ಬಗ್ಗೆ ತಕ್ಷಣ ಸರ್ಕಾರಕ್ಕೆ ವರದಿ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಸರ್ಕಾರದ ಮೂಲಕ ಗರಿಷ್ಠ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.ಸ್ಥಳಕ್ಕೆ ಸೂಕ್ತ ರಸ್ತೆ ಸಂಪರ್ಕದ ಬಗ್ಗೆ ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕರು, ರಸ್ತೆ ಸಂಪರ್ಕ ಜಾಗದ ಮಾಲೀಕರು ರಸ್ತೆಗೆ ಅವಕಾಶ ಕಲ್ಪಿಸಿದರೆ ರಸ್ತೆ ಕಾಮಗಾರಿಗೆ ಆದ್ಯತೆ ಮೇರೆಗೆ ಅನುದಾನ ಒದಗಿಸುವ ಭರವಸೆ ನೀಡಿದರು. ಮಗುವಿನ ತಂದೆ ಪ್ರಶಾಂತ್ ಪೂಜಾರಿ, ತಾಯಿ ಸುಚಿತ್ರ ಹಾಗೂ ಕುಟುಂಬಸ್ಥರನ್ನು ಸಂತೈಸಿ, ವೈಯುಕ್ತಿಕ ನೆಲೆಯಲ್ಲಿ ಪರಿಹಾರ ಧನ ನೀಡಿದರು.

ಸ್ಥಳೀಯರಾದ ಬಿ.ಎನ್. ಶಂಕರ್ ಪೂಜಾರಿ, ಮಹೇಶ್ ಕೋಟ್ಯಾನ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸುಶಾಂತ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ನಿತ್ಯಾನಂದ ಪೂಜಾರಿ ಚಾಂತಾರು, ಕಂದಾಯ ಇಲಾಖೆಯ ಅಧಿಕಾರಿ ರಾಜು, ಪಂಚಾಯಿತಿ ಅಧಿಕಾರಿ ಮೀರಾ ಇದ್ದರು.